ADVERTISEMENT

ನಿವೃತ್ತಿ ಪ್ರಕಟಿಸಿದ ಆ್ಯಂಡಿ ಮರ್ರೆ: ಒಲಿಂಪಿಕ್ಸ್‌ ಕೊನೆಯ ಟೂರ್ನಿ ಎಂದ ಆಟಗಾರ

ಪಿಟಿಐ
Published 23 ಜುಲೈ 2024, 20:07 IST
Last Updated 23 ಜುಲೈ 2024, 20:07 IST
<div class="paragraphs"><p>ಆ್ಯಂಡಿ ಮರ್ರೆ</p></div>

ಆ್ಯಂಡಿ ಮರ್ರೆ

   

ಪ್ಯಾರಿಸ್‌ (ಎಎಫ್‌ಪಿ): ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಹಾಗೂ ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಆ್ಯಂಡಿ ಮರ್ರೆ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ನಂತರ ಆಟದಿಂದ ನಿವೃತ್ತರಾಗುವುದಾಗಿ ಖಚಿತಪಡಿಸಿದ್ದಾರೆ. ಆ ಮೂಲಕ ಟೆನಿಸ್‌ ಸುವರ್ಣಯುಗದ ಮತ್ತೊಬ್ಬ ಆಟಗಾರ ವಿದಾಯ ಹೇಳಿದಂತಾಗಿದೆ.

‘ನನ್ನ ಕೊನೆಯ ಟೆನಿಸ್‌ ಟೂರ್ನಿಯನ್ನು ಒಲಿಂಪಿಕ್ಸ್‌ನಲ್ಲಿ ಆಡಲು ಪ್ಯಾರಿಸ್‌ಗೆ ಬಂದಿಳಿದಿದ್ದೇನೆ’ ಎಂದು 37 ವರ್ಷ ವಯಸ್ಸಿನ ಬ್ರಿಟನ್‌ನ ಅಗ್ರ ಸಿಂಗಲ್ಸ್‌ ಆಟಗಾರ ಹೇಳಿದ್ದಾರೆ.

ADVERTISEMENT

ಮರ್ರೆ ಅವರು ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ 121ನೇ ಸ್ಥಾನದಲ್ಲಿದ್ದಾರೆ. ಆಗಾಗ ಗಾಯದ ಸಮಸ್ಯೆಗೆ ಅವರು ಒಳಗಾಗುತ್ತಿದ್ದರು. ಕೆಲಸಮಯದಿಂದ ಪಾದದ ನೋವಿನಿಂದಲೂ ಬಳಲುತ್ತಿದ್ದರು. ಬೆನ್ನುಹುರಿಯಲ್ಲಿದ್ದ ಗಡ್ಡೆಯನ್ನು ತೆಗೆದುಹಾಕಲು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪೂರ್ಣವಾಗಿ ಚೇತರಿಸದ ಕಾರಣ ಅವರು ವಿಂಬಲ್ಡನ್‌ ಸಿಂಗಲ್ಸ್‌ನಿಂದ ಹಿಂದೆಸರಿದಿದ್ದರು. ಸಹೋದರ ಜೇಮಿ ಜೊತೆ ಡಬಲ್ಸ್‌ನಲ್ಲಿ ಆಡಿದ್ದರೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

‘ನಾನು ಈ ಆಟವನ್ನು ಸದಾ ಆಡಬಯಸುತ್ತೇನೆ. ನಾನು ಟೆನಿಸ್‌ನಿಂದ ಸಾಕಷ್ಟು ಪಡೆದಿದ್ದೇನೆ. ಈ ಆಟವು ವೃತ್ತಿಜೀವನದಲ್ಲಿ ಸಾಕಷ್ಟು ಪಾಠಗಳನ್ನೂ ಕಲಿಸಿದೆ. ಮುಂದೆ ಅವು ಉಪಯೋಗಕ್ಕೆ ಬರಬಹುದು’  ಎಂದು ಮರ್ರೆ ಬರೆದಿದ್ದಾರೆ.

2013ರಲ್ಲಿ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆಲುವು ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಆ ಮೂಲಕ ಮರ್ರೆ ಅವರು ಬ್ರಿಟನ್‌ನ 77 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದ್ದರು. ತಮ್ಮ ದೀರ್ಘಕಾಲದ ಎದುರಾಳಿ ನೊವಾಕ್ ಜೊಕೊವಿಚ್‌ ಅವರನ್ನು ಫೈನಲ್‌ನಲ್ಲಿ ಸೋಲಿಸಿದ್ದರು. ಇದರ ಜೊತೆಗೆ ಅವರು 2012 ಮತ್ತು 2016ರಲ್ಲಿ ಅಮೆರಿಕ ಓಪನ್‌ನಲ್ಲೂ ಪ್ರಶಸ್ತಿ ಗೆದ್ದಿದ್ದರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅವರು ರೋಜರ್‌ ಫೆಡರರ್‌ ಅವರನ್ನು ಸೋಲಿಸಿ ತವರಿನಲ್ಲಿ ಚಾಂಪಿಯನ್ ಆಗಿದ್ದು ಅವರ ಪಾಲಿಗೆ ಭಾವನಾತ್ಮಕ ಗೆಲುವು. ಏಕೆಂದರೆ ನಾಲ್ಕು ವಾರಗಳ ಹಿಂದೆ ಅದೇ ಸೆಂಟರ್‌ಕೋರ್ಟ್‌ನಲ್ಲಿ ನಡೆದಿದ್ದ ವಿಂಬಲ್ಡನ್‌ ಫೈನಲ್‌ನಲ್ಲಿ ಅವರು ಸ್ವಿಸ್‌ ಆಟಗಾರನಿಗೇ ಮಣಿದಿದ್ದರು.

ನಾಲ್ಕು ವರ್ಷಗಳ ನಂತರ ರಿಯೊ ಒಲಿಂಪಿಕ್ಸ್‌ನಲ್ಲಿ ಜುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ ಅವರನ್ನು ಮಣಿಸಿ ಸತತ ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಮೊದಲ ಟೆನಿಸಿಗನೆಂಬ ಗೌರವಕ್ಕೆ ಪಾತ್ರರಾದರು.

2015ರಲ್ಲಿ ಬ್ರಿಟನ್‌ ಡೇವಿಸ್‌ ಕಪ್‌ ಅನ್ನು ಗೆಲ್ಲುವಲ್ಲೂ ಅವರ ಪಾತ್ರ ಪ್ರಮುಖ.  ಇದು 79 ವರ್ಷಗಳಲ್ಲಿ ಬ್ರಿಟನ್‌ಗೆ ಒಲಿದ ಮೊದಲ ಡೇವಿಸ್‌ ಕಪ್ ಪ್ರಶಸ್ತಿ ಎನಿಸಿತ್ತು.

ಅವರು ಟೆನಿಸ್‌ ವೃತ್ತಿಜೀವನದಲ್ಲಿ ಒಟ್ಟು 46 ಪ್ರಶಸ್ತಿಗಳನ್ನು ಜಯಿಸಿದ್ದರು. ಬಹುಮಾನ ಮೊತ್ತವಾಗಿ ಅವರು ಸುಮಾರು ₹544 ಕೋಟಿ ಗೆದ್ದಿದ್ದಾರೆ.

ಅವರ ಯಶಸ್ಸು ಬಂದಿದ್ದು, ರೋಜರ್‌ ಫೆಡರರ್‌, ನೊವಾಕ್‌ ಜೊಕೊವಿಚ್‌ ಮತ್ತು ರಫೆಲ್‌ ನಡಾಲ್ ಅವರು ವಿಜೃಂಭಿಸುತ್ತಿದ್ದ ಅವಧಿಯಲ್ಲಿ ಎಂಬುದು ಗಮನಾರ್ಹ. ಈ ಮೂವರು ತಮ್ಮ ನಡುವೆ 66 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದುಕೊಂಡು ಆಧಿಪತ್ಯ ಮೆರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.