ಮೆಲ್ಬರ್ನ್: ಭಾರತದ ರೋಹನ್ ಬೋಪಣ್ಣ ಅವರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಪುರುಷರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಫೈನಲ್ ಪಂದ್ಯದಲ್ಲಿ ಶನಿವಾರ ಸಿಮೋನ್ ಬೊಲೆಲಿ ಮತ್ತು ಆ್ಯಂಡ್ರಿಯಾ ವಾವಸೋರಿ ಜೋಡಿಯನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಒಂದು ಗಂಟೆ, ಮೂವತ್ತೊಂಬತ್ತು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬೋಪಣ್ಣ–ಎಬ್ಡೆನ್ ಜೋಡಿ 7–6 (0), 7–5 ರಿಂದ ಇಟಲಿಯ ಸಿಮೋನ್ ಬೊಲೆಲಿ ಮತ್ತು ಆ್ಯಂಡ್ರಿಯಾ ವಾವಸೋರಿ ಜೋಡಿಯನ್ನು ಮಣಿಸಿತು.
ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರನೆಂಬ ಹೆಗ್ಗಳಿಕೆಗೂ ಕೊಡಗಿನ ರೋಹನ್ ಪಾತ್ರರಾದರು. ಈ ಹಿಂದೆ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಪ್ರಶಸ್ತಿ ಗೆದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಸಾನಿಯಾ ಮಿರ್ಜಾ ಜಯಿಸಿದ್ದರು.
ರೋಹನ್ ಅವರಿಗೆ ವೃತ್ತಿಜೀವನದ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಇದಾಗಿದೆ. 2017ರ ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ಅವರು ಮಿಶ್ರ ಡಬಲ್ಸ್‌ನಲ್ಲಿ ಗೆದ್ದಿದ್ದರು. ಆಗ ಕೆನಡಾದ ಗ್ಯಾಬ್ರಿಯೆಲಾ ದಬ್ರೋವ್‌ಸ್ಕಿ ಅವರ ಜೊತೆಗಾರ್ತಿಯಾಗಿದ್ದರು.
43 ವರ್ಷದ ಬೋಪಣ್ಣ ಪುರುಷರ ಟೆನಿಸ್‌ನಲ್ಲಿ ಅತ್ಯಂತ ಹಿರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 40ನೇ ವಯಸ್ಸಿನಲ್ಲಿ ಮಾರ್ಸೆಲೊ ಅರೆವೊಲಾ ಅವರೊಂದಿಗೆ 2022 ರಲ್ಲಿ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಚಾಂಪಿಯನ್ ಆಗಿದ್ದ ಜೀನ್-ಜೂಲಿಯನ್ ರೋಜರ್ ಅವರ ದಾಖಲೆಯನ್ನು ಮೀರಿದರು.
ಬೋಪಣ್ಣ ಎರಡು ಬಾರಿ (2013, 2023) ಅಮೆರಿಕ ಓಪನ್ ಡಬಲ್ಸ್ ಫೈನಲ್ ತಲುಪಿದ್ದರು. ಆದರೆ ಪ್ರಶಸ್ತಿ ಒಲಿದಿರಲಿಲ್ಲ. ಕಳೆದ ಬಾರಿ ಫೈನಲ್‌ನಲ್ಲಿ ಪಾಕಿಸ್ತಾನದ ಆಸಿಮ್ ಉಲ್ ಹಕ್ ಖುರೇಷಿ ಜೊತೆ ಆಡಿದ್ದರು. ಅವರು ರಾಜೀವ್ ರಾಮ್ ಮತ್ತು ಜೋ ಸ್ಯಾಲಿಸ್ಟರಿ ಜೋಡಿ ಎದುರು ಸೋತಿದ್ದರು.
'ಪಂದ್ಯಗಳನ್ನು ಗೆಲ್ಲದ ಕಾರಣಕ್ಕೆ ನಾನು ಒಂದು ದಿನ ವಿದಾಯ ಹೇಳುತ್ತೇನೆಂದು ಕೆಲ ವರ್ಷಗಳ ಹಿಂದೆ ವಿಡಿಯೊ ಸಂದೇಶದಲ್ಲಿ ಹೇಳಿದ್ದೆ. ಐದು ತಿಂಗಳು ಪಂದ್ಯವನ್ನು ಗೆಲ್ಲಲಿಲ್ಲ. ಇದು ನನ್ನ ಪ್ರಯಾಣದ ಅಂತ್ಯ ಎಂದು ಭಾವಿಸಿದ್ದೆ. ಆದರೆ ನನ್ನ ಪರಿಶ್ರಮ ಈಗ ಫಲ ನೀಡಿತು‘ ಎಂದು ರೋಹನ್ ಸಂತಸ ವ್ಯಕ್ತಪಡಿಸಿದರು.
ಡಬಲ್ಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಬೋಪಣ್ಣ ಅಗ್ರಸ್ಥಾನಕ್ಕೇರುವುದು ಖಚಿತವಾಗಿದೆ. ಸೋಮವಾರ ಹೊಸ ರ್‍ಯಾಂಕಿಂಗ್ ಪಟ್ಟಿ ಪ್ರಕಟವಾಗಲಿದೆ. ಈ ಸ್ಥಾನಕ್ಕೇರಲಿರುವ ಅತಿ ಹಿರಿಯ ವಯಸ್ಸಿನ ಆಟಗಾರ ಅವರಾಗಲಿದ್ದಾರೆ. ಬೋಪಣ್ಣ ಅವರು ತಮ್ಮ ಯಶಸ್ಸಿನ ಪಯಣದಲ್ಲಿ ಜೊತೆಗಾರ ಆಸ್ಟ್ರೇಲಿಯಾದ ಎಬ್ಡೆನ್ ಮತ್ತು ಅಮೆರಿಕದ ತರಬೇತುದಾರ ಸ್ಕಾಟ್ ಡೇವಿಡಾಫ್ ಅವರ ಕೊಡುಗೆಯನ್ನು ಶ್ಲಾಘಿಸಿದರು. ‘ಈ ಅದ್ಭುತ ಜೊತೆಗಾರ ನನಗೆ ಇಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಎಬ್ಡೆನ್‌ಗೆ ಧನ್ಯವಾದಗಳು‘ ಎಂದರು.
‘ಬೋಪಣ್ಣನಿಗೆ ವಯಸ್ಸು ಎಂಬುದು ಲೆಕ್ಕಕ್ಕೆ ಇಲ್ಲ. ಅವರು ನಿಜವಾದ ಚಾಂಪಿಯನ್, ಅವರು ಹೋರಾಡುವ ಯೋಧ, ನಾನು ನಿಮಗೆ ಮತ್ತು ನಿಮ್ಮ ಅದ್ಭುತ ತಂಡಕ್ಕೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಧನ್ಯವಾದಗಳು ಗೆಳೆಯ!’ ಎಂದು ಎಬ್ಡೆನ್ ಪಂದ್ಯದ ನಂತರ ಭಾವುಕರಾಗಿ ಹೇಳಿದರು.
ರಾಡ್ ಲೇವರ್ ಅರೇನಾದಲ್ಲಿ ನಡೆದ ಪ್ರಬಲ ಹೋರಾಟದಲ್ಲಿ ವಾವಸೋರಿ ಮತ್ತು ಬೊಲೆಲಿ ಅವರು ಶಕ್ತಿಶಾಲಿ ಹೊಡೆತಗಳನ್ನು ಪ್ರದರ್ಶಿಸಿದರು. ಆದರೆ ಅನುಭವಿ ಬೋಪಣ್ಣ–ಎಬ್ಡೆನ್ ಜೋಡಿ ಅದಕ್ಕೆ ತಕ್ಕ ಉತ್ತರ ನೀಡಿತು. ನಿರ್ಣಾಯಕ ಸಂದರ್ಭದಲ್ಲಿ ಉತ್ತಮ ಸರ್ವ್‌ಗಳ ಮೂಲಕ ಪಾಯಿಂಟ್ಸ್ ಗಳಿಸಿದರು. ಟ್ರೈ ಬ್ರೇಕರ್‌ನಲ್ಲೂ ಪಾಯಿಂಟ್ಸ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.