ADVERTISEMENT

ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿ: ಕ್ವಾರ್ಟರ್‌ ಫೈನಲ್‌ಗೆ ಚುನ್‌ ಸೆಂಗ್

ಮಹಮ್ಮದ್ ನೂಮಾನ್
Published 22 ಫೆಬ್ರುವರಿ 2023, 23:30 IST
Last Updated 22 ಫೆಬ್ರುವರಿ 2023, 23:30 IST
ಚೀನಾ ತೈಪೆಯ ಚುನ್‌ ಸಿನ್‌ ಸೆಂಗ್‌ ಆಟದ ವೈಖರಿ.  ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಚೀನಾ ತೈಪೆಯ ಚುನ್‌ ಸಿನ್‌ ಸೆಂಗ್‌ ಆಟದ ವೈಖರಿ. ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ತಮ್ಮದೇ ದೇಶದ ಯು ಸಿಯೊ ಸು ಒಡ್ಡಿದ ಪೈಪೋಟಿ ಯನ್ನು ಸಮರ್ಥವಾಗಿ ಎದುರಿಸಿದ ಅಗ್ರಶ್ರೇಯಾಂಕದ ಆಟಗಾರ ಚೀನಾ ತೈಪೆಯ ಚುನ್‌ ಸಿನ್‌ ಸೆಂಗ್‌‌, ಬೆಂಗಳೂರು ಓಪನ್‌ ಟೆನಿಸ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಬುಧವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಚುನ್‌ 6–2, 5–7, 7–6 ಸೆಟ್‌ಗಳಿಂದ ಗೆದ್ದರು. ದೀರ್ಘ ರ್‍ಯಾಲಿಗಳು, ವೇಗದ ಸರ್ವ್‌ ಮತ್ತು ಆಕರ್ಷಕ ರಿಟರ್ನ್‌ಗಳಿಂದ ರಂಗೇರಿದ ಈ ಪಂದ್ಯ ಮೂರು ತಾಸು 34 ನಿಮಿಷ ನಡೆಯಿತು. 21 ವರ್ಷದ ಚುನ್‌ ಅವರು ಮೊದಲ ಸೆಟ್‌ನಲ್ಲಿ ಆಡಿದ ರೀತಿ ನೋಡಿದಾಗ ಸುಲಭವಾಗಿ ಎಂಟರಘಟ್ಟ ಪ್ರವೇಶಿಸುವರು ಎಂದು ಭಾವಿಸ ಲಾಗಿತ್ತು. ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಬೇಗನೇ ಸೆಟ್‌ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಸಿಯೊ, ಆರಂಭದಲ್ಲೇ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 4–1 ರಲ್ಲಿ ಮೇಲುಗೈ ಪಡೆದರು. ಮರುಹೋರಾಟದ ನಡೆಸಿದ ಚುನ್‌ 4–4 ರಲ್ಲಿ ಸಮಬಲ ಸಾಧಿಸಿದರು. ಆದರೆ ದಿಟ್ಟ ಆಟವಾಡಿದ ಸಿಯೊ 7–5 ರಲ್ಲಿ ಗೆದ್ದು, ಪಂದ್ಯವನ್ನು ಮೂರನೇ ಸೆಟ್‌ಗೆ ಕೊಂಡೊಯ್ದರು. ನಿರ್ಣಾಯಕ ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ ಗೆದ್ದ ಚುನ್‌, ಮುಂದಿನ ಸು
ತ್ತು ಪ್ರವೇಶಿಸಿದರು.

ADVERTISEMENT

ಮೆಕೇಬ್‌ಗೆ ಗೆಲುವು: ಆಸ್ಟ್ರೇ ಲಿಯಾದ ಇಬ್ಬರು ಆಟಗಾರರ ನಡುವಿನ ಪೈಪೋಟಿಯಲ್ಲಿ ಜೇಮ್ಸ್‌ ಮೆಕೇಬ್‌ ಜಯಿಸಿದರು. ಅವರು 7–5, 7–5 ರಲ್ಲಿ ಮಾರ್ಕ್‌ ಪೊಲ್ಮನ್ಸ್‌ ವಿರುದ್ಧ ಗೆದ್ದರು.

ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಹರಾಲ್ಡ್ ಮೆಯೊಟ್ 7–6, 6–0 ರಲ್ಲಿ ಬ್ರಿಟನ್‌ನ ರ್‍ಯಾನ್‌ ಪೆನೈಸ್ಟನ್‌ ವಿರುದ್ಧ; ಸರ್ಬಿಯದ ಹಮದ್‌ ಮೆಜೆಡೊವಿಚ್‌ 6–3, 5–7, 6–4 ರಲ್ಲಿ ಅಮೆರಿಕದ ನಿಕೊಲಸ್‌ ಮೊರೆನೊ ವಿರುದ್ಧ ಜಯಿಸಿದರು.

ಡಬಲ್ಸ್‌ ವಿಭಾಗದ ಪಂದ್ಯಗಳಲ್ಲಿ ಭಾರತದ ಅನಿರುದ್ಧ್‌ ಚಂದ್ರಶೇಖರ್‌– ಎನ್‌.ವಿಜಯ್‌ ಸುಂದರ್‌ ಪ್ರಶಾಂತ್‌ ಜೋಡಿ 7–5, 6–2 ರಲ್ಲಿ ಎಸ್‌.ಡಿ.ಪ್ರಜ್ವಲ್‌ ದೇವ್– ಪರೀಕ್ಷಿತ್‌ ಸೊಮಾನಿ ವಿರುದ್ಧ; ಅರ್ಜುನ್‌ ಖಾಡೆ–‌ಮ್ಯಾಕ್ಸಿಮಿಲಿಯನ್ ನ್ಯುಕ್ರೈಸ್ಟ್‌ ಜೋಡಿ 7–6, 6–4 ರಲ್ಲಿ ಜೆಕ್‌ ಗಣರಾಜ್ಯದ ಪೆಟ್ರ್‌ ನೌಜಾ– ಆ್ಯಂಡ್ರ್ಯೂ ಪೌಲ್‌ಸನ್‌ ವಿರುದ್ಧ; ರಾಮಕುಮಾರ್‌ ರಾಮನಾಥನ್– ಫ್ರಾನ್ಸೆಸ್ಕೊ ಮಾಸ್ಟ್ರೆಲಿ ಜೋಡಿ 6–2, 7–6 ರಲ್ಲಿ ಕಾಲಿನ್‌ ಸಿಂಕ್ಲೇರ್‌– ಮಿಜಾನ್‌ ಜೆಕಿಚ್‌ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.