ಬೆಂಗಳೂರು: ಭಾರತದ ಭರವಸೆ ಎನಿಸಿದ್ದ ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್.ವಿಜಯ್‌ಸುಂದರ್ ಪ್ರಶಾಂತ್ ಜೋಡಿ, ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಎಡವಿತು.
ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಕೊರಿಯದ ಯುನ್ ಸಾಂಗ್ ಚುನ್– ಚೀನಾ ತೈಪೆಯ ಯು ಸಿಯು ಸು ಜೋಡಿ 3–6, 7–6, 11–9 ರಲ್ಲಿ ಭಾರತದ ಜೋಡಿಯನ್ನು ಮಣಿಸಿ ಚಾಂಪಿಯನ್ ಆಯಿತು. ಮೊದಲ ಸೆಟ್ ಗೆದ್ದರೂ ಅನಿರುದ್ಧ್–ವಿಜಯ್ ಅವರು ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡರು.
‘ಆಲ್ ಆಸ್ಟ್ರೇಲಿಯನ್’ ಫೈನಲ್: ಭಾನುವಾರ ನಡೆಯಲಿರುವ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಮತ್ತು ಜೇಮ್ಸ್ ಡಕ್ವರ್ಥ್ ಪೈಪೋಟಿ ನಡೆಸಲಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಡಕ್ವರ್ಥ್ 6–3, 6–3 ರಲ್ಲಿ ತಮ್ಮದೇ ದೇಶದ ಜೇಮ್ಸ್ ಮೆಕೇಬ್ ಅವರನ್ನು ಮಣಿಸಿದರು.
ಪ್ರಬಲ ಹೋರಾಟ ನಡೆದ ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಪರ್ಸೆಲ್ 6–2, 5–7, 7–6 (7–4) ರಲ್ಲಿ ಸರ್ಬಿಯದ ಹಮದ್ ಮೆಜೆಡೊವಿಚ್ ವಿರುದ್ದ ಗೆದ್ದರು. ಈ ಹೋರಾಟ 2 ಗಂಟೆ 10 ನಿಮಿಷ ನಡೆಯಿತು.
ಪರ್ಸೆಲ್ ಮೊದಲ ಸೆಟ್ ನಿರಾಯಾಸದಿಂದ ಗೆದ್ದರಾದರೂ, ಹಮದ್ ಎರಡನೇ ಸೆಟ್ ಗೆದ್ದು ಸಮಬಲ ಸಾಧಿಸಿದರು. ಮೂರನೇ ಸೆಟ್‌ನಲ್ಲೂ ರೋಚಕ ಹಣಾಹಣಿ ನಡೆದು 6–6 ರಲ್ಲಿ ಸಮಬಲ ಕಂಡುಬಂತು. ಟೈಬ್ರೇಕರ್‌ನಲ್ಲಿ ಶಿಸ್ತಿನ ಆಟವಾಡಿದ ಪರ್ಸೆಲ್ ಫೈನಲ್‌ಗೆ ಲಗ್ಗೆಯಿಟ್ಟರು.
ಹಮದ್ ಅವರು ಚೇರ್ ಅಂಪೈರ್‌ಗಳು ನೀಡಿದ ತೀರ್ಪಿನ ವಿರುದ್ಧ ಹಲವು ಸಲ ಅಸಮಾಧಾನ ಹೊರಹಾಕಿದರು. ಪಾಯಿಂಟ್ ಕೈಬಿಟ್ಟಾಗ ಆಗಿಂದಾಗ್ಗೆ ತಾಳ್ಮೆ ಕಳೆದುಕೊಂಡರು. ಮತ್ತೊಂದೆಡೆ ಶಾಂತವಾಗಿ ಆಡಿದ ಪರ್ಸೆಲ್, ಪ್ರೇಕ್ಷಕರ ಮನಗೆದ್ದರು.
ಪರ್ಸೆಲ್ (9) ಅವರಿಗೆ ಹೋಲಿಸಿದರೆ ಹಮದ್ (14) ಹೆಚ್ಚು ಏಸ್‌ಗಳನ್ನು ಸಿಡಿಸಿದರು. ಆದರೆ ಸ್ವಯಂಕೃತ ತಪ್ಪುಗಳು ಅವರಿಗೆ ಮುಳುವಾಗಿ ಪರಿಣಮಿಸಿದವು. ಸರ್ಬಿಯದ ಆಟಗಾರ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಚೀನಾ ತೈಪೆಯ ಚುನ್ ಸಿನ್ ಸೆಂಗ್ ಅವರಿಗೆ ಆಘಾತ ನೀಡಿದ್ದರು.
ಡಕ್ವರ್ಥ್–ಮೆಕೇಬ್ ನಡುವಣ ಪಂದ್ಯ ಒಂದು ಗಂಟೆ 20 ನಿಮಿಷ ನಡೆಯಿತು. ಮೊದಲ ಸೆಟ್‌ನಲ್ಲಿ 3–3 ರಲ್ಲಿ ಸಮಬಲ ಕಂಡುಬಂತು. ಏಳನೇ ಗೇಮ್‌ನಲ್ಲಿ ಡಕ್ವರ್ಥ್, ಎದುರಾಳಿಯ ಸರ್ವ್ ಬ್ರೇಕ್ ಮಾಡಿ ಮುನ್ನಡೆ ಗಳಿಸಿದರು. ತಮ್ಮ ಸರ್ವ್‌ನಲ್ಲಿ ಪಾಯಿಂಟ್ ಗಳಿಸಿದರಲ್ಲದೆ, ಒಂಬತ್ತನೇ ಗೇಮ್‌ನಲ್ಲೂ ಎದುರಾಳಿಯ ಸರ್ವ್ ಬ್ರೇಕ್ ಮಾಡಿ ಸೆಟ್ ಗೆದ್ದರು. ಮೆಕೇಬ್ ಅವರು ಡಬಲ್ ಫಾಲ್ಟ್ಸ್ ಮಾಡಿದರಲ್ಲದೆ, ಕೆಲವೊಂದು ರಿಟರ್ನ್‌ಗಳು ಕೋರ್ಟ್‌ನ ಹೊರಕ್ಕೆ ಹೋದವು.
ಎರಡನೇ ಸೆಟ್‌ನ ಮೊದಲ ಏಳು ಗೇಮ್‌ಗಳಲ್ಲಿ ಯಾವುದೇ ಸರ್ವಿಸ್ ಬ್ರೇಕ್ ಆಗಲಿಲ್ಲ. ಎಂಟನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ ಡಕ್ವರ್ಥ್ 5–3 ರಲ್ಲಿ ಮೇಲುಗೈ ಪಡೆದರು. ಒಂಬತ್ತನೇ ಗೇಮ್‌ನಲ್ಲಿ ತಮ್ಮ ಸರ್ವ್‌ನಲ್ಲಿ ಪಾಯಿಂಟ್ ಗಳಿಸಿ ಪಂದ್ಯ ಗೆದ್ದರು.
ಡಕ್ವರ್ಥ್ ಅವರು ಬೇಸ್‌ಲೈನ್ ಬಳಿಯ ಆಟದಲ್ಲಿ ಚುರುಕುತನ ತೋರಿದ್ದು ಮಾತ್ರವಲ್ಲದೆ, ಅವಕಾಶ ಸಿಕ್ಕಾಗ ನೆಟ್ ಬಳಿ ಧಾವಿಸಿ ಡ್ರಾಪ್ ಶಾಟ್‌ಗಳ ಮೂಲಕ ಪಾಯಿಂಟ್ ಕಲೆಹಾಕಿದರು. ಕಲವೊಂದು ಏಸ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.