ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ ಚುನ್ ಸಿನ್ ಸೆಂಗ್ ಅವರಿಗೆ ಆಘಾತ ನೀಡಿದ ಸರ್ಬಿಯದ ಹಮದ್ ಮೆಜೆಡೊವಿಚ್, ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.
ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಮದ್ 6–1, 6–2 ರಲ್ಲಿ ಚೀನಾ ತೈಪೆಯ ಚುನ್ ವಿರುದ್ಧ ಗೆದ್ದರು.
ವೇಗದ ಸರ್ವ್, ನಿಖರ ರಿಟರ್ನ್‌ಗಳು ಮತ್ತು ಪ್ರಬಲ ಗ್ರೌಂಡ್‌ಶಾಟ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಸರ್ಬಿಯದ ಆಟಗಾರ ಒಂದು ಗಂಟೆ ಎಂಟು ನಿಮಿಷಗಳಲ್ಲಿ ಜಯಿಸಿದರು.
ಎಟಿಪಿ ರ್‍ಯಾಂಕಿಂಗ್‌ನಲ್ಲಿ 255ನೇ ಸ್ಥಾನದಲ್ಲಿರುವ ಹಮದ್, 131ನೇ ರ್‍ಯಾಂಕ್‌ನ ಆಟಗಾರನಿಗೆ ಹೋರಾಟ ನಡೆಸಲೂ ಅವಕಾಶ ನೀಡಲಿಲ್ಲ. ಪಂದ್ಯದಲ್ಲಿ ಕೇವಲ ಮೂರು ಗೇಮ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.
ಹಮದ್ ಅವರು ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಅವರ ಸವಾಲು ಎದುರಿಸುವರು.
ದಿನದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಪರ್ಸೆಲ್ 6–2, 6–0 ರಲ್ಲಿ ಇಟಲಿಯ ಲುಕಾ ನಾರ್ಡಿ ವಿರುದ್ಧ ಗೆದ್ದರು. ಪರ್ಸೆಲ್ ಅವರು ಪಂದ್ಯದ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್ ಬ್ರೇಕ್ ಮಾಡಿ ತಮ್ಮ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಿದರು.
ಐದನೇ ಗೇಮ್‌ನಲ್ಲೂ ಎದುರಾಳಿಯ ಸರ್ವ್ ಬ್ರೇಕ್ ಮಾಡಿದರು. ತಮ್ಮ ಎಲ್ಲ ಸರ್ವ್‌ಗಳಲ್ಲಿ ಪಾಯಿಂಟ್ಸ್ ಗಳಿಸಿ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಅವರು ಎದುರಾಳಿಗೆ ಯಾವುದೇ ಗೇಮ್ ಬಿಟ್ಟುಕೊಡಲಿಲ್ಲ.
ಶನಿವಾರ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್ ಮತ್ತು ಜೇಮ್ಸ್ ಮೆಕೇಬ್ ಎದುರಾಗುವರು.
ಎರಡನೇ ಶ್ರೇಯಾಂಕದ ಆಟಗಾರ ಡಕ್ವರ್ಥ್ 6–4, 6–1 ರಲ್ಲಿ ಬಲ್ಗೇರಿಯದ ದಿಮಿತರ್ ಕುಜ್ಮನೊವ್ ವಿರುದ್ಧ ಗೆದ್ದರೆ, ಮೆಕೇಬ್ 6–3, 7–6 ರಲ್ಲಿ ಫ್ರಾನ್ಸ್‌ನ ಹರೊಲ್ಡ್ ಮೆಯೊಟ್ ಅವರನ್ನು ಮಣಿಸಿದರು.
ಡಬಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿರುವ ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್.ವಿಜಯ್‌ಸುಂದರ್ ಪ್ರಶಾಂತ್ ಜೋಡಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಯ ಭರವಸೆ ಮೂಡಿಸಿದೆ.
ರೋಚಕ ಹೋರಾಟ ನಡೆದ ಸೆಮಿಫೈನಲ್‌ನಲ್ಲಿ ಅವರು 7–6, 4–6, 10–2 ರಲ್ಲಿ ಭಾರತದ ಅರ್ಜುನ್ ಖಾಡೆ ಮತ್ತು ಆಸ್ಟ್ರಿಯದ ಮ್ಯಾಕ್ಸಿಮಿಲಿಯನ್ ನ್ಯುಕ್ರೈಸ್ಟ್ ವಿರುದ್ಧ ಗೆದ್ದರು.
ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಕೊರಿಯದ ಯುನ್ ಸಾಂಗ್ ಚುನ್– ಚೀನಾ ತೈಪೆಯ ಯು ಸಿಯು ಸು ಜೋಡಿ 6–4, 6–4 ರಲ್ಲಿ ಆಸ್ಟ್ರೇಲಿಯಾದ ಮಾರ್ಕ್ ಪೊಲ್ಮನ್ಸ್– ಮ್ಯಾಕ್ಸ್ ಪರ್ಸೆಲ್ ಅವರನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.