ಮೆಲ್ಬರ್ನ್: ಬಲಶಾಲಿ ಹೊಡೆತ ಮತ್ತು ತಂತ್ರಶಾಲಿ ಆಟದ ಮೂಲಕ ಎದುರಾಳಿಯನ್ನು ಮಣಿಸಿದ ಆ್ಯಶ್ಲಿ ಬಾರ್ಟಿ, ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ರಾಡ್ ಲೇವರ್ ಅರೆನಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಮೆರಿಕದ ಡ್ಯಾನಿಯಲ್ ಕಾಲಿನ್ಸ್ ವಿರುದ್ಧ ಬಾರ್ಟಿ6-3, 7-6 (7/2)ರಲ್ಲಿ ಜಯ ಗಳಿಸಿದರು. ಈ ಮೂಲಕ 44 ವರ್ಷಗಳ ನಂತರ ಟೂರ್ನಿಯ ಪ್ರಶಸ್ತಿ ಗೆದ್ದ ಮೊದಲ ಸ್ಥಳೀಯ ಟೆನಿಸ್ ಪಟು ಎನಿಸಿಕೊಂಡರು.
ಮೊದಲ ಶ್ರೇಯಾಂಕದ ಬಾರ್ಟಿ ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದ್ದರು. ಎರಡನೇ ಸೆಟ್‌ನಲ್ಲಿ ಒಂದು ಹಂತದಲ್ಲಿ 1–5ರ ಹಿನ್ನಡೆಯಲ್ಲಿದ್ದರು. ಅಲ್ಲಿಂದ ಚೇತರಿಸಿಕೊಂಡು ಅಮೋಘ ಆಟದ ಮೂಲಕ ತವರಿನ ಪ್ರೇಕ್ಷಕರಿಗೆ ಮುದ ನೀಡಿದರು. ಈ ಸೆಟ್ ಟೈ ಬ್ರೇಕರ್‌ಗೆ ಸಾಗಿತು. ಎದೆಗುಂದದ ಬಾರ್ಟಿ 27ನೇ ಶ್ರೇಯಾಂಕಿತೆಗೆ ಕೇವಲ ಎರಡು ಪಾಯಿಂಟ್ ಬಿಟ್ಟುಕೊಟ್ಟು ಪ್ರಶಸ್ತಿ ಮುಡಿಗೇರಿಸಿಕೊಂಡರು.
25 ವರ್ಷದ ಬಾರ್ಟಿ ಅವರಿಗೆ ಇದು ಮೂರನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ. 2019ರ ಫ್ರೆಂಚ್ ಓಪನ್ ಮತ್ತು ಕಳೆದ ಬಾರಿ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದರು. ಆವೆಮಣ್ಣು ಮತ್ತು ಹಸಿರು ಅಂಗಣಳೆರಡರಲ್ಲೂ ಗೆದ್ದ ಅಪರೂಪದ ಸಾಧನೆ ಮಾಡಿದ್ದಾರೆ.
28 ವರ್ಷದ ಕಾಲಿನ್ಸ್ ಎದುರು ಬಲವಾದ ಹೊಡೆಗಳೊಂದಿಗೆ ಮಿಂಚಿದ ಬಾರ್ಟಿ ಮಿಂಚಿನ ಸರ್ವ್‌ಗಳ ಮೂಲಕ ಎದುರಾಳಿಯನ್ನು ಗೊಂದಲಕ್ಕೆ ಈಡುಮಾಡಿದರು. ಅವರ ಫೋರ್‌ಹ್ಯಾಂಡ್ ಹೊಡೆತಗಳು ಕಣ್ಣಿಗೆ ಆನಂದವುಂಟು ಮಾಡಿದವು.
ಆರಂಭದಲ್ಲಿ ಉಭಯ ಆಟಗಾರ್ತಿಯರು ಅವಕಾಶಗಳನ್ನು ಸೃಷ್ಟಿಸಿಕೊಂಡರು. ಸರ್ವಿಸ್ ಗೇಮ್‌ಗಳ ಮೂಲಕ ಪಾಯಿಂಟ್ ಕಲೆ ಹಾಕಿದರು. ಕಾಲಿನ್ಸ್ ನೆಲಮಟ್ಟದ ಹೊಡೆತಗಳಿಗೆ ಮೊರೆ ಹೋದರು. ಆದರೆ ಇದರಿಂದ ನಷ್ಟವೇ ಆಯಿತು. ಆದರೂ 2–2ರಲ್ಲಿ ಸಮಬಲ ಸಾಧಿಸಲು ಯಶಸ್ವಿಯಾದರು. ಈ ಹಂತದಲ್ಲಿ ಏಸ್ ಸಿಡಿಸಿದ ಬಾರ್ಟಿ ಮುನ್ನಡೆ ಸಾಧಿಸಿದರು. ನಂತರ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿ 4–2ರಲ್ಲಿ ಮುನ್ನುಗ್ಗಿದರು. 32 ನಿಮಿಷಗಳಲ್ಲಿ ಕೊನೆಗೊಂಡ ಮೊದಲ ಸೆಟ್ ಗೆದ್ದು ಸಂಭ್ರಮಿಸಿದರು.
ಎರಡನೇ ಸೆಟ್‌ನ ಆರಂಭದಲ್ಲಿ ಕಾಲಿನ್ಸ್ ತಿರುಗೇಟು ನೀಡಿದರು. ಬಾರ್ಟಿ ಅವರ ಸರ್ವ್ ಮುರಿದು 2–0 ಮುನ್ನಡೆ ಗಳಿಸಿದರು. ಮತ್ತು ಆಧಿಪತ್ಯ ಮುಂದುವರಿಸಿ ಮುನ್ನಡೆಯನ್ನು 5–1ಕ್ಕೆ ಹಿಗ್ಗಿಸಿದರು. ಆದರೆ ಸತತ ಮೂರು ಗೇಮ್‌ಗಳನ್ನು ಗೆದ್ದುಕೊಂಡ ಬಾರ್ಟಿ ನಂತರ ಹಿಡಿತ ಬಿಗಿಗೊಳಿಸಿದರು.
ಕನಸು ನನಸಾದ ದಿನವಿದು. ಆಸ್ಟ್ರೇಲಿಯಾದ ಕ್ರೀಡಾಪಟು ಎಂದು ಹೇಳಿಕೊಳ್ಳಲು ನನಗೆ ಅಭಿಮಾನವಿದೆ. ಕಾಲಿನ್ಸ್ ಅವರಂಥ ಆಟಗಾರ್ತಿಯನ್ನು ಮಣಿಸಲು ಪ್ರೇಕ್ಷಕರ ಪ್ರೋತ್ಸಾಹ ಬಲ ತುಂಬಿತು.
- ಆ್ಯಶ್ಲಿ ಬಾರ್ಟಿ, ಟೂರ್ನಿಯ ಚಾಂಪಿಯನ್
ನಾನು ಬಾರ್ಟಿ ಅವರ ದೊಡ್ಡ ಅಭಿಮಾನಿ. ಪ್ರಶಸ್ತಿಗೆ ಅವರು ಎಲ್ಲ ಬಗೆಯಲ್ಲೂ ಅರ್ಹರು. ಅವರು ಪಾಯಿಂಟ್‌ಗಳನ್ನು ಕಲೆ ಹಾಕುವ ಆಟದ ವಿಧಾನ ವಿಶಿಷ್ಟವಾದುದು.
- ಕ್ರಿಸ್ಟಿನ್ ಒ ನೀಲ್,1978ರಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ಆಟಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.