ADVERTISEMENT

Bengaluru Open: ಕ್ವಾರ್ಟರ್‌ಗೆ ನಗಾಲ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 22:17 IST
Last Updated 15 ಫೆಬ್ರುವರಿ 2024, 22:17 IST
<div class="paragraphs"><p>ಭಾರತದ ಸುಮಿತ್‌ ನಗಾಲ್‌ ಅವರು ಹಾಂಗ್‌ಕಾಂಗ್‌ನ ಕೋಲ್ಮನ್ ವಾಂಗ್ ವಿರುದ್ಧ ಗೆದ್ದು ಸಂಭ್ರಮಿಸಿದರು </p></div>

ಭಾರತದ ಸುಮಿತ್‌ ನಗಾಲ್‌ ಅವರು ಹಾಂಗ್‌ಕಾಂಗ್‌ನ ಕೋಲ್ಮನ್ ವಾಂಗ್ ವಿರುದ್ಧ ಗೆದ್ದು ಸಂಭ್ರಮಿಸಿದರು

   

–ಪ್ರಜಾವಾಣಿ ಚಿತ್ರ/ಕೃಷ್ಣ ಕುಮಾರ್‌ ಪಿ.ಎಸ್.

ಬೆಂಗಳೂರು: ಭಾರತದ ಅಗ್ರಗಣ್ಯ ಆಟಗಾರ ಸುಮಿತ್‌ ನಗಾಲ್ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದ್ದು, ಗುರುವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ADVERTISEMENT

ನಗರದ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ನಗಾಲ್‌ 6-2, 7-5 ರಿಂದ ಹಾಂಗ್‌ಕಾಂಗ್‌ನ ಕೋಲ್ಮನ್ ವಾಂಗ್ ಅವರನ್ನು ಹಿಮ್ಮೆಟ್ಟಿಸಿದರು.

ವಿಶ್ವದ 98ನೇ ಕ್ರಮಾಂಕದ ಆಟಗಾರ ನಗಾಲ್‌ ಅವರು, ಎದುರಾಳಿ ಆಟಗಾರನ ವಿರುದ್ಧ ಆರಂಭದಿಂದಲೇ ಪಾರಮ್ಯ ಸಾಧಿಸಿದ್ದರು. ಮೊದಲ ಸೆಟ್‌ ಅನ್ನು ಸುಲಭವಾಗಿ ಕೈವಶ ಮಾಡಿಕೊಂಡಿದ್ದ ಭಾರತದ ಆಟಗಾರನಿಗೆ ಎರಡನೇ ಸೆಟ್‌ನಲ್ಲಿ ಪ್ರಬಲ ಸ್ಪರ್ಧೆ ಎದುರಾಯಿತು. ಹಿನ್ನಡೆಯಿಂದ ಚೇತರಿಸಿಕೊಂಡ 19 ವರ್ಷದ ಕೋಲ್ಮನ್‌ ಸಮಬಲದ ಹೋರಾಟ ನಡೆಸಿದರು. ಆದರೆ, ಅಂತಿಮವಾಗಿ 26 ವರ್ಷದ ನಗಾಲ್‌ ಗೆದ್ದು ಮುನ್ನಡೆದರು. ಮುಂದಿನ ಸುತ್ತಿನಲ್ಲಿ ನಗಾಲ್ ಐದನೇ ಶ್ರೇಯಾಂಕದ ಆ್ಯಡಂ ವಾಲ್ಟನ್‌ (ಆಸ್ಟ್ರೇಲಿಯಾ) ಅವರನ್ನು ಎದುರಿಸಲಿದ್ದಾರೆ. ವಾಲ್ಟನ್ 6–2, 6–2ರಿಂದ ಬೆಲ್ಜಿಯಂನ ಗೌಥಿಯರ್ ಆನ್‌ಕ್ಲಿನ್ ಅವರನ್ನು ಮಣಿಸಿದರು.

ಮತ್ತೊಂದು ಪಂದ್ಯದಲ್ಲಿ 7ನೇ ಶ್ರೇಯಾಂಕದ ಸ್ಟೆಫಾನೊ ನಪೊಲಿಟಾನೊ (ಇಟಲಿ) 6-4, 4-6, 6-4ರಿಂದ ಕೆನಡಾದ ವಾಸೆಕ್ ಪೊಸ್ಪಿಸಿಲ್ ಅವರನ್ನು ಸೋಲಿಸಿ, ಎಂಟರ ಘಟ್ಟ ಪ್ರವೇಶಿಸಿದರು. ಅವರು ಮುಂದಿನ ಸುತ್ತಿನಲ್ಲಿ ಟುನೀಶಿಯಾದ ಮೊಯೆಜ್ ಎಚಾರ್ಗುಯಿ ಅವರನ್ನು ಎದುರಿಸುವರು. ಮೊಯೆಜ್‌ ಅವರು ಎರಡನೇ ಸುತ್ತಿನಲ್ಲಿ ಇಟಲಿಯ ಡಲ್ಲಾ ವೆಲ್ಲಾ ಅವರನ್ನು 6-2, 6-2ರಿಂದ ಸೋಲಿಸಿದರು.

ಪುರುಷರ ಡಬಲ್ಸ್‌ನಲ್ಲಿ ಭಾರತದ ರಾಮಕುಮಾರ್‌ ರಾಮನಾಥನ್‌ ಮತ್ತು ಸಾಕೇತ್ ಮೈನೇನಿ ಜೋಡಿಯು 6–4, 6–4 ರಿಂದ ಜರ್ಮನಿಯ ಜಾಕೋಬ್ ಸ್ಕ್ನೈಟರ್ ಮತ್ತು ಮಾರ್ಕ್ ವಾಲ್ನರ್ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.