ಬೆಂಗಳೂರು: ಭಾರತದ ರಾಮಕುಮಾರ್ ರಾಮನಾಥನ್ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದರು. ಅವರು 5–7, 7–5, 4–6ರಿಂದ ದಕ್ಷಿಣ ಕೊರಿಯಾದ ಹಾಂಗ್ ಸಿಯೊಂಗ್ ಚಾನ್ ಅವರಿಗೆ ಮಣಿದರು.
ನಗರದ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ ರಾಮಕುಮಾರ್ ಅವರು ಒಂಬತ್ತನೇ ಶ್ರೇಯಾಂಕದ ಹಾಂಗ್ ಅವರಿಗೆ ತೀವ್ರ ಪೈಪೋಟಿ ನಡೆಸಿದರು. ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಭಾರತದ ಸ್ಪರ್ಧಿ ಮೊದಲ ಸೆಟ್‌ನಲ್ಲಿ ಸರ್ವ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡಿದರು.
ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ರಾಮಕುಮಾರ್, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸಿದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಎದುರಾಳಿ ಆಟಗಾರ ವೇಗದ ಸರ್ವ್ ಮತ್ತು ನಿಖರ ರಿಟರ್ನ್‌ಗಳಿಗೆ ತಕ್ಕ ಉತ್ತರ ನೀಡಿ ಮೇಲುಗೈ ಸಾಧಿಸಿದರು.
ಮತ್ತೊಂದು ಎಂಟರ ಘಟ್ಟದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಸ್ಟೆಫನೊ ನಾಪೊಲಿಟಾನೊ(ಇಟಲಿ) 6–7, 6–4, 6–4ರಿಂದ ಟುನೇಶಿಯಾದ ಮೊಯೆಜ್ ಎಚಾರ್ಗುಯಿ ಅವರನ್ನು ಹಿಮ್ಮೆಟ್ಟಿಸಿದರು.
ಇನ್ನೊಂದು ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಓರಿಯೊಲ್ ರೋಕಾ ಬಟಾಲ್ಲಾ (ಸೇನ್) ಅವರು 7–5, 4–6, 7–5ರಿಂದ ಪೋಲೆಂಡ್‌ನ ಮಾಕ್ಸ್ ಕಸ್ನಿಕೋವ್ಸ್ಕಿ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.