ADVERTISEMENT

Bengaluru Open | ಕ್ವಾರ್ಟರ್‌ಫೈನಲ್‌ಗೆ ರಾಮಕುಮಾರ್

ಬೆಂಗಳೂರು ಓಪನ್‌ ಟೆನಿಸ್‌: ಅಗ್ರ ಶ್ರೇಯಾಂಕದ ನಾರ್ಡಿ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 0:10 IST
Last Updated 15 ಫೆಬ್ರುವರಿ 2024, 0:10 IST
<div class="paragraphs"><p>ಭಾರತದ ರಾಮಕುಮಾರ್ ರಾಮನಾಥನ್‌ ಆಟದ ವೈಖರಿ </p></div>

ಭಾರತದ ರಾಮಕುಮಾರ್ ರಾಮನಾಥನ್‌ ಆಟದ ವೈಖರಿ

   

–ಪ್ರಜಾವಾಣಿ ಚಿತ್ರ/ ಪುಷ್ಕರ್‌ ವಿ.

ಬೆಂಗಳೂರು: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ರಾಮಕುಮಾರ್‌ ರಾಮನಾಥನ್‌ ಅವರು ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಲೂಕಾ ನಾರ್ಡಿ ಅವರನ್ನು ಹಿಮ್ಮೆಟ್ಟಿಸಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ADVERTISEMENT

ನಗರದ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ ರಾಮಕುಮಾರ್‌ ಅವರು 1-6, 6-4, 6-4 ರಿಂದ ಇಟಲಿಯ ಆಟಗಾರನಿಗೆ ಆಘಾತ ನೀಡಿದರು.

ಟೂರ್ನಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ರಾಮಕುಮಾರ್‌ ಒಂದು ಗಂಟೆ 33 ನಿಮಿಷ ನಡೆದ ಹೋರಾಟದ ಆರಂಭದಲ್ಲಿ ಸರ್ವ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡಿದರು. ಇದರ ಲಾಭವನ್ನು ಪಡೆದ ಎದುರಾಳಿ ಆಟಗಾರ ಮೊದಲ ಸೆಟ್‌ ಅನ್ನು ನಿರಾಯಾಸವಾಗಿ ಕೈವಶ ಮಾಡಿಕೊಂಡರು.

ಎರಡನೇ ಸೆಟ್‌ನಲ್ಲಿ ಪುಟಿದೆದ್ದ ರಾಮಕುಮಾರ್‌ ಶೇ 93ರಷ್ಟು ಮೊದಲ ಸರ್ವ್ ಪಾಯಿಂಟ್‌ಗಳನ್ನು ಗೆದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿ ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲೂ ನಿಖರ ಆಟ ಪ್ರದರ್ಶಿಸಿದ ಭಾರತದ ಆಟಗಾರ ಎಂಟರ ಘಟ್ಟಕ್ಕೆ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು 9ನೇ ಶ್ರೇಯಾಂಕದ ಸಿಯೊಂಗ್‌ಚಾನ್ ಹಾಂಗ್ (ದಕ್ಷಿಣ ಕೊರಿಯಾ) ಅವರನ್ನು ಶುಕ್ರವಾರ ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ ಪೋಲೆಂಡ್‌ನ ಮಾಕ್ಸ್ ಕಸ್ನಿಕೋವ್ಸ್ಕಿ 6–3, 6–4ರಿಂದ ನಾಲ್ಕನೇ ಶ್ರೇಯಾಂಕದ ಬೆಂಜಮಿನ್ ಬೊಂಜಿ (ಫ್ರಾನ್ಸ್‌) ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. 

ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದ ಭಾರತದ ಮತ್ತೊಬ್ಬ ಆಟಗಾರ ಎಸ್‌.ಡಿ. ಪ್ರಜ್ವಲ್ ದೇವ್ ಅವರು ಮೊದಲ ಸುತ್ತಿನಲ್ಲಿ 3-6, 0-6 ರಿಂದ ಐದನೇ ಶ್ರೇಯಾಂಕದ ಆಡಮ್ ವಾಲ್ಟನ್ (ಆಸ್ಟ್ರೇಲಿಯಾ) ಅವರಿಗೆ ಮಣಿದರು.

ಪುರುಷರ ಡಬಲ್ಸ್‌ನಲ್ಲಿ ರಾಮಕುಮಾರ್‌ ಮತ್ತು ಸಾಕೇತ್ ಮೈನೇನಿ ಜೋಡಿಯು ಎಂಟರ ಘಟ್ಟ ಪ್ರವೇಶಿಸಿತು. ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ಜೋಡಿಯು 6-0, 7-6 (2) ಸ್ವದೇಶದ ಸಿದ್ಧಾಂತ್ ಬಂಥಿಯಾ ಮತ್ತು ಎಸ್‌.ಡಿ. ಪ್ರಜ್ವಲ್ ದೇವ್ ಅವರನ್ನು ಸೋಲಿಸಿತು.

 ನಾಲ್ಕನೇ ಶ್ರೇಯಾಂಕದ ರಿತ್ವಿಕ್ ಚೌಧರಿ ಮತ್ತು ನಿಕ್ಕಿ ಪೂಣಚ್ಚ ಜೋಡಿಯು 4-6, 4-6 ರಿಂದ ಮೊಯೆಜ್ ಎಚಾರ್ಗುಯಿ (ಟುನೀಶಿಯಾ) ಮತ್ತು ಓರಿಯೊಲ್ ರೋಕಾ ಬಟಾಲ್ಲಾ (ಸ್ಪೇನ್‌) ಜೋಡಿಗೆ ಶರಣಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.