ಬೆಂಗಳೂರು: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ರಾಮಕುಮಾರ್ ರಾಮನಾಥನ್ ಅವರು ಸೋಮವಾರ ಆರಂಭವಾದ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಎರಡನೇ ಸುತ್ತಿಗೆ ಮುನ್ನಡೆದರು.
ನಗರದ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಸುತ್ತಿನ ಪಂದ್ಯದಲ್ಲಿ ರಾಮಕುಮಾರ್ ಅವರು 6-7(4), 7-5, 6-4 ಸೆಟ್‌ಗಳಿಂದ ಫ್ರಾನ್ಸ್‌ನ ಮ್ಯಾಕ್ಸಿಮ್ ಜಾನ್ವಿಯರ್ ಅವರನ್ನು ಹಿಮ್ಮೆಟ್ಟಿಸಿದರು.
ಟೂರ್ನಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ 29 ವರ್ಷ ವಯಸ್ಸಿನ ಭಾರತದ ಆಟಗಾರ, ತೀವ್ರ ಹೋರಾಟದ ನಡುವೆಯೂ ಟೈಬ್ರೇಕರ್‌ನಲ್ಲಿ ಮೊದಲ ಸೆಟ್ ಕಳೆದುಕೊಂಡರು.
ನಂತರ ಪುಟಿದೆದ್ದ ಅವರು ವೇಗದ ಸರ್ವ್, ನಿಖರ ರಿಟರ್ನ್‌ಗಳ ಮೂಲಕ ಹಿಡಿತ ಸಾಧಿಸಿದರು.
ಎರಡು ಗಂಟೆ 26 ನಿಮಿಷ ನಡೆದ ಸೆಣಸಾಟದಲ್ಲಿ ತವರಿನ ಪ್ರೇಕ್ಷಕರ ಎದುರು ರಾಮಕುಮಾರ್ ಗೆದ್ದು ಬೀಗಿದರು.
ಈ ಗೆಲುವಿನೊಂದಿಗೆ ರಾಮಕುಮಾರ್ ಅವರು ಮ್ಯಾಕ್ಸಿಮ್ ಅವರೊಂದಿಗೆ ಗೆಲುವಿನ ದಾಖಲೆಯನ್ನು 2–1ಕ್ಕೆ ಹೆಚ್ಚಿಸಿಕೊಂಡರು. ಅವರು ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಇಟಲಿಯ ಲುಕಾ ನಾರ್ಡಿ ಮತ್ತು ಫ್ರಾನ್ಸ್‌ನ ಲಕ್ಕಿ ಲೂಸರ್ ಡಾನ್ ಆಡೆಡ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ, ಟುನೀಶಿಯಾದ ಮೊಯೆಜ್ ಎಚಾರ್ಗುಯಿ ಅವರು ಮೂರನೇ ಶ್ರೇಯಾಂಕದ ಡುಜೆ ಅಜ್‌ಡುಕೋವಿಕ್ (ಕ್ರೊವೇಷಿಯಾ) ಅವರಿಗೆ ಆಘಾತ ನೀಡಿದರು. ಒಂದೂವರೆ ಗಂಟೆಗಳ ಹೋರಾಟದಲ್ಲಿ ಟುನೀಶಿಯಾದ ಆಟಗಾರ 6-2, 6-4 ರಿಂದ ಕ್ರೊವೇಷಿಯಾ ಆಟಗಾರನನ್ನು ನೇರ ಸೆಟ್‌ಗಳಿಂದ ಸೋಲಿಸಿದರು.
ಭಾರತದ ಅಗ್ರಗಣ್ಯ ಆಟಗಾರ ಸುಮಿತ್ ನಗಾಲ್ ಅವರು ಮಂಗಳವಾರ ಫ್ರೆಂಚ್ ಆಟಗಾರ ಜೆಫ್ರಿ ಬ್ಲಾಂಕಾನಿಯಾಕ್ಸ್ ವಿರುದ್ಧ ಅಭಿಯಾನ ಆರಂಭಿಸುವರು.
ಫಲಿತಾಂಶಗಳು: ಪ್ರಧಾನ ಸುತ್ತು: ರಾಮಕುಮಾರ್ ರಾಮನಾಥನ್ (ಭಾರತ) 6-7 (4), 7-5, 6-4ರಿಂದ ಮ್ಯಾಕ್ಸಿಮ್ ಜಾನ್ವಿಯರ್ (ಫ್ರಾನ್ಸ್) ವಿರುದ್ಧ, ಮೊಯೆಜ್ ಎಚಾರ್ಗುಯಿ (ಟುನೀಶಿಯಾ) 6-2, 6-4ರಿಂದ ಡುಜೆ ಅಜ್‌ಡುಕೋವಿಕ್ (ಕ್ರೊವೇಷಿಯಾ) ವಿರುದ್ಧ; ಗೌಥಿಯರ್ ಆನ್ಕ್ಲಿನ್ (ಬೆಲ್ಜಿಯಂ) 6-4, 1-6, 7-6 (5)ರಿಂದ ಜಿಯೋವಾನಿ ಫೋನಿಯೊ (ಇಟಲಿ) ವಿರುದ್ಧ ಜಯ ಗಳಿಸಿದರು.
ಅರ್ಹತಾ ಸುತ್ತು: ಬರ್ನಾಡ್ ಟಾಮಿಕ್ 6-4, 6-2ರಿಂದ ಜೊನಾಸ್ ಫೊರೆಜ್ಟೆಕ್ ಎದುರು; ಚುನ್–ಹ್ಸಿನ್ ತ್ಸೆಂಗ್ 7-5, 4-6, 6-2ರಿಂದ ಯುನ್ ಸಿಯೋಂಗ್ ಚುಂಗ್ ಎದುರು; ವಿನ್ಸೆಂಟ್ ರುಗ್ಗೇರಿ 6–0, 6–2ರಿಂದ ವ್ಯಾನ್ ವೈಕ್ ಎದುರು ಗೆಲುವು ಪಡೆದರು.
ರ‍್ಯಾಂಕಿಂಗ್: 98ನೇ ಸ್ಥಾನಕ್ಕೆ ಜಿಗಿದ ನಗಾಲ್
ನವದೆಹಲಿ: ಭಾರತದ ಅಗ್ರಗಣ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಸೋಮವಾರ ಪ್ರಕಟಗೊಂಡ ಎಟಿಪಿ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 23 ಸ್ಥಾನ ಬಡ್ತಿಪಡೆದು, ವೃತ್ತಿಜೀವನದಲ್ಲಿ ಮೊದಲ ಬಾರಿ ಅಗ್ರ 100ರೊಳಗೆ ಸ್ಥಾನ ಪಡೆದಿದ್ದಾರೆ.
ಭಾನುವಾರ ಮುಕ್ತಾಯಗೊಂಡ ಚೆನ್ನೈ ಓಪನ್ ಚಾಲೆಂಜರ್ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿದ ನಗಾಲ್ 121ರಿಂದ 98ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮಧ್ಯೆ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ಓಪನ್‌ನ ಮೊದಲ ಸುತ್ತಿನಲ್ಲಿ ವಿಶ್ವದ 27ನೇ ಕ್ರಮಾಂಕದ ಅಲೆಕ್ಸಾಂಡರ್ ಬುಬ್ಲಿಕ್ (ಕಝಾಕಿಸ್ತಾನ) ಅವರನ್ನು ಸೋಲಿಸುವ ಮೂಲಕ ನಗಾಲ್ ಐತಿಹಾಸಿಕ ಸಾಧನೆ ಮಾಡಿದ್ದರು.
2019ರಲ್ಲಿ ಪ್ರಜ್ಞೇಶ್ ಗುಣೇಶ್ವರನ್ 75ನೇ ರ‍್ಯಾಂಕ್ ಪಡೆದಿದ್ದರು. ಅದಾದ ಬಳಿಕ ಅಗ್ರ 100ರಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಹಿರಿಮೆಗೆ ನಗಾಲ್ ಪಾತ್ರವಾದರು.
‘ಪ್ರತಿಯೊಬ್ಬ ಟೆನಿಸ್ ಆಟಗಾರನಿಗೆ ಅಗ್ರ 100ರಲ್ಲಿ ಸ್ಥಾನ ಪಡೆಯುವುದು ದೊಡ್ಡ ಕನಸು. ಅದು ನನಸಾಗಿದ್ದರಿಂದ ತುಂಬಾ ಭಾವುಕನಾಗಿದ್ದೇನೆ. ಸಾಧನೆಯ ಹಾದಿಯಲ್ಲಿ ಏರಿಳಿತಗಳನ್ನು ಕಂಡರೂ ಈಗಿನ ಸಾಧನೆ ಖುಷಿ ತಂದಿದೆ’ ಎಂದು ಚೆನ್ನೈನಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.