ಲಂಡನ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಸೋಮವಾರ ಆರಂಭವಾದ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯಿಸಿದರು.
ಅವರು ಎಸ್ಟೋನಿಯಾದ ಮಾರ್ಕ್ ಲಾಜಲ್ ವಿರುದ್ಧ 7-6 (7/3), 7-5, 6-2ರಿಂದ ಗೆಲುವು ಸಾಧಿಸಿದ್ದಾರೆ. ಪಂದ್ಯದ ಮೊದಲ ಸೆಟ್‌ನಲ್ಲಿ ಉಭಯ ಆಟಗಾರರು ಕಠಿಣ ಪೈಪೋಟಿ ನಡೆಸಿದರು. ಇದರಿಂದಾಗಿ ಟೈ ಬ್ರೇಕರ್‌ನಲ್ಲಿ ಫಲಿತಾಂಶ ನಿರ್ಧಾರ ವಾಯಿತು. ಮೂರನೇ ಶ್ರೇಯಾಂಕದ ಅಲ್ಕರಾಜ್ ಛಲದ ಆಟವಾಡಿ ಈ ಸೆಟ್ ತಮ್ಮದಾಗಿಸಿಕೊಂಡರು.
21 ವರ್ಷ ವಯಸ್ಸಿನ ಅಲ್ಕರಾಜ್, ತಮ್ಮ ನಾಲ್ಕನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಡ್ ಲೇವರ್, ಬಯೊನ್ ಬಾರ್ಗ್, ರೋಜರ್ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ನಂತರ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಪ್ರಶಸ್ತಿಯನ್ನು ಸತತವಾಗಿ ಜಯಸಿದ ಆರನೇ ಆಟಗಾರನಾಗುವ ಭರವಸೆಯನ್ನು ಸ್ಪೇನ್ ದೇಶದ ಅಲ್ಕರಾಜ್ ಮೂಡಿಸಿದ್ದಾರೆ.
ರಷ್ಯಾದ ಐದನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಟೂರ್ನಿ ಯಲ್ಲಿ ಎರಡನೇ ಸುತ್ತು ತಲುಪಿದ್ದಾರೆ. ಅವರು 6-3, 6-4, 6-2 ರಿಂದ ಅಮೆರಿಕದ ಅಲೆಕ್ಸಾಂಡರ್ ಕೊವಾಸೆವಿಚ್ ವಿರುದ್ಧ ಗೆದ್ದರು. ಮೆಡ್ವೆಡೆವ್ ಮುಂದಿನ ಸುತ್ತಿನಲ್ಲಿ ಅಲೆಕ್ಸಾಂಡ್ರೆ ಮುಲ್ಲರ್ ಅಥವಾ ಹ್ಯೂಗೋ ಗ್ಯಾಸ್ಟನ್ ಅವರನ್ನು ಎದುರಿಸುತ್ತಾರೆ. ಮೆಡ್ವೆಡೆವ್ ಅವರು ಹೋದ ವರ್ಷ ಸೆಮಿಫೈನಲ್ ತಲುಪಿದ್ದರು.
ಟೂರ್ನಿಯ ಮೊದಲ ದಿನ ಕೆನಡಾದ ಡೆನಿಸ್ ಶಪೋವಾಲೋವ್ ಶುಭಾರಂಭ ಮಾಡಿದ್ದು, ಚಿಲಿಯ ನಿಕೋಲಸ್ ಜೆರ್ರಿ ವಿರುದ್ಧ 6–1, 7–5, 6–4ರಿಂದ ಗೆಲುವು ಸಾಧಿಸಿದರು.
ದಿನದ ಇತರ ಪಂದ್ಯಗಳಲ್ಲಿ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅವರು 6-3, 6-4, 7-5ರಿಂದ ಸೈಬಿರಿಯಾದ ದುಸಾನ್ ಲಾಜೊವಿಕ್ ವಿರುದ್ಧ; ಚೀನಾದ ಶಾಂಗ್ ಜುಂಚೆಂಗ್, ಚಿಲಿಯ ಕ್ರಿಶ್ಚಿಯನ್ ಗ್ಯಾರಿನ್ ವಿರುದ್ಧ 7-5, 6-4, 6-4ರಿಂದ; ಜರ್ಮನಿಯ ಜಾನ್-ಲೆನ್ನಾರ್ಡ್ ಸ್ಟ್ರಫ್, ಹಂಗೇರಿಯ ಫ್ಯಾಬಿಯನ್ ಮರೋಜ್ ಸಾನ್ ವಿರುದ್ಧ 6-4, 6-7 (4/7), 6-2, 6-3ರಿಂದ; ಕ್ರೋವೇಷಿಯಾದ ಬೊರ್ನಾ ಕೊರಿಚ್, ಫಿಲಿಪ್ ಮೆಲಿಜೆನಿ ಅಲ್ವೆಸ್ ವಿರುದ್ಧ 6-3, 7-6 (7/2), 6-3ರಿಂದ; ಇಟಲಿಯ ಫ್ಯಾಬಿಯೊ ಫಾಗ್ನಿನಿ, ಲುಕಾ ವ್ಯಾನ್ ಆಸ್ಚೆ ವಿರುದ್ಧ 6-1, 6-3, 7-5ರಿಂದ; ನಾರ್ವೆಯ ಕ್ಯಾಸ್ಪರ್ ರೂಡ್, ಆಸ್ಟ್ರೇಲಿಯಾ ಅಲೆಕ್ಸ್ ಬೋಲ್ಟ್ ವಿರುದ್ಧ 7-6 (7/2), 6-4, 6-4ರಿಂದಲೂ ಜಯಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಝು ಲಿನ್ 6-0, 6-4 ರಿಂದ ಇರಾನ್‌ನ ಕ್ಯಾಮೆಲಿಯಾ ಬೇಗು ವಿರುದ್ಧ ಗೆದ್ದು ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಉಳಿದಂತೆ ರಷ್ಯಾದ ಅನಾಸ್ತೆಸಿಯಾ ಪಾವ್ಲ್ಯುಚೆಂಕೋವಾ 7-6 (7/4), 6-1ರಿಂದ ಟೇಲರ್ ಟೌನ್ಸೆಂಡ್ ವಿರುದ್ಧ ಗೆದ್ದರು. ಗ್ರೀಸ್‌ನ ಮರಿಯಾ ಸಕ್ಕಾರಿ, ಅಮೇರಿಕ ಮೆಕ್ ಕರ್ಟ್ನಿ ಕೆಸ್ಲರ್ 6-3, 6-1ರಿಂದ ಜಯ ಸಾಧಿಸಿದರು.
ಉಕ್ರೇನ್‌ನ ಡಯಾನಾ ಯಾಸ್ಟ್ರೆಮ್ಸ್ಕಾ, ಅರ್ಜಂಟೀನಾನ ನಾಡಿಯಾ ವಿರುದ್ಧ 6-1, 7-6 (7/1)ರಿಂದ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.