ಬೆಂಗಳೂರು: ಕರ್ನಾಟಕದ ಚಂದನ್ ಶಿವರಾಜ್ ಮತ್ತು ಕಾಜಲ್ ರಾಮಿಸೆಟ್ಟಿ ಅವರು ಎಐಟಿಎ ಸಿಎಸ್7 18 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಟೆನಿಸ್360 ಅಕಾಡೆಮಿ ಅಂಗಣದಲ್ಲಿ ನಡೆದ ಟೂರ್ನಿಯ ಬಾಲಕರ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಚಂದನ್7-5, 6-0ರಿಂದ ಕರ್ನಾಟಕದ ಮನದೀಪ್ ರೆಡ್ಡಿ ಕುದುಮಲ ಅವರನ್ನು ಪರಾಭವಗೊಳಿಸಿದರು. ಮೊದಲ ಸೆಟ್‌ನಲ್ಲಿ ಸ್ವಲ್ಪ ಹೋರಾಟ ತೋರಿದ ಮನದೀಪ್, ಎರಡನೇ ಸೆಟ್‌ಅನ್ನು ಸುಲಭವಾಗಿ ಕೈಚೆಲ್ಲಿದರು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕಾಜಲ್6-4, 4-6, 6-2ರಿಂದ ಕರ್ನಾಟದವರೇ ಆದ ಹೃದಯೇಶಿ ಪೈ ಅವರನ್ನು ಸೋಲಿಸಿದರು. ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದ ಮೊದಲ ಸೆಟ್‌ಅನ್ನು ಕಾಜಲ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ನಿಖರ ಸರ್ವ್‌ಗಳ ಮೂಲಕ ಹೃದಯೇಶಿ ತಮ್ಮದಾಗಿಸಿಕೊಂಡರು. ಆದರೆ ಛಲಬಿಡದ ಕಾಜಲ್ ಮೂರನೇ ಸೆಟ್‌ನಲ್ಲಿ ಪಾರಮ್ಯ ಮೆರೆದರು.
ಬಾಲಕರ ಡಬಲ್ಸ್‌ನಲ್ಲಿ ಅರ್ಜುನ್ ಪ್ರೇಮಕುಮಾರ್– ಅರ್ಜುನ್ ಜೀತೇಂದ್ರ6-2, 2-6, 10-8ರಿಂದ ಅನೂಪ್ ಕೇಶವಮೂರ್ತಿ– ತಿರುಮುರುಗನ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದರು. ಬಾಲಕಿಯರ ಡಬಲ್ಸ್ ಕಿರೀಟವು ಕಾಜಲ್–ಹೃದಯೇಶಿ ಪಾಲಾಯಿತು. ಫೈನಲ್‌ನಲ್ಲಿ ಈ ಜೋಡಿಯು6-2, 6-3ರಿಂದ ಮಧ್ಯಪ್ರದೇಶದ ಅಫ್ಸಾ ಅಹಮದ್ ಮತ್ತು ಮಹಾರಾಷ್ಟ್ರದ ಶ್ರೀಯಾ ಸಾಯಿ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.