ನ್ಯೂಯಾರ್ಕ್: ಒಂದರ ಮೇಲೊಂದರಂತೆ ಮ್ಯಾಚ್ ಪಾಯಿಂಟ್‌ಗಳು ಕೈತಪ್ಪಿದರೂ ಕೊಕೊ ಗಾಫ್ ಸ್ವಲ್ಪವೂ ವಿಚಲಿತರಾಗಲಿಲ್ಲ. ಪರಿಸರಹೋರಾಟಗಾರರು ಪಂದ್ಯದ ಮಧ್ಯೆ 50 ನಿಮಿಷಗಳ ಕಾಲ ಅಡ್ಡಿ ಉಂಟುಮಾಡಿದರೂ ಅವರ ಗುರಿಗೆ ಭಂಗಬರಲಿಲ್ಲ. ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ ಉದಯೋನ್ಮುಖ ತಾರೆ ಗಾಫ್ ಅಮೆರಿಕ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ತಲುಪಿದರು.
ಪಳೆಯುಳಿಕೆ ಇಂಧನಗಳ ರಕ್ಷಣೆಗೆ ಆಗ್ರಹಿಸಿ ನಾಲ್ವರು ಹೋರಾಟಗಾರರು ಕ್ರೀಡಾಂಗಣಕ್ಕೆ ಬಂದಿದ್ದರು. ಎರಡನೇ ಸೆಟ್ ಆರಂಭದಲ್ಲಿ ಈ ಘಟನೆ ನಡೆಯಿತು. ಅವರನ್ನು ಪೊಲೀಸರು ಹೊರಕಳುಹಿಸಿದರು. ಇವೆಲ್ಲದರ ಮಧ್ಯೆ ಅಮೆರಿಕದ ಫ್ಲಾರಿಡಾದ 19 ವರ್ಷದ ಆಟಗಾರ್ತಿ ತಾವು ಸಾಮಾನ್ಯ ಆಟಗಾರ್ತಿಯಲ್ಲ ಎಂಬುದನ್ನು ಸಾರಿದರು. ಈಗ ಅವರು ಪ್ರಶಸ್ತಿಯಿಂದ ಒಂದು ಹೆಜ್ಜೆಯಷ್ಟೇ ದೂರ ಇದ್ದಾರೆ.
ಆರನೇ ಶ್ರೇಯಾಂಕದ ಗಾಫ್ 6–4, 7–5 ರಿಂದ ಹತ್ತನೇ ಶ್ರೇಯಾಕದ ಮುಚೋವಾ ಅವರನ್ನು ಸೋಲಿಸಿ ಫ್ಲಷಿಂಗ್ ಮಿಡೋಸ್‌ನಲ್ಲಿ ಮೊದಲ ಬಾರಿ ಫೈನಲ್ ತಲುಪಿದರು. ಅವರು ಶನಿವಾರ ಫೈನಲ್‌ನಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ.
‘ಈಗ ಸಾಧನೆಗೆ ಬೇಕಾದ ಪ್ರಬುದ್ಧತೆ ಮತ್ತು ಸಾಮರ್ಥ್ಯ ನನ್ನಲಿದೆಯೆಂಬ ವಿಶ್ವಾಸ ಮೂಡಿದೆ’ ಎಂದು ಗಾಫ್ ಹೇಳಿದರು. ಕಳೆದ ವರ್ಷ ಅವರು ಫ್ರೆಂಚ್ ಓಪನ್ ಫೈನಲ್ ತಲುಪಿದ್ದು ಅಲ್ಲಿ ಇಗಾ ಶ್ವಾಂಟೆಕ್‌ಗೆ ಸೋತಿದ್ದರು. ‘ಕೆಲವು ವಾರಗಳಿಂದ ಆಡುತ್ತಿರುವ ರೀತಿಯ ಬಗ್ಗೆ ಹೆಮ್ಮೆಯಿದೆ’ ಎಂದರು.
ತವರಿನ ಪ್ರೇಕ್ಷಕರ ಭಾರಿ ಬೆಂಬಲ ಪಡೆದಿದ್ದ ಗಾಫ್ ಅವರು ಗೆಲುವಿನ ಹೊಸ್ತಿಲಲ್ಲಿ ಕೊಂಚ ಪರದಾಡಿದರು. ಆರನೇ ಯತ್ನದಲ್ಲಿ, ದೀರ್ಘ ರ್‍ಯಾಲಿಯನಂತರ ಫೋರ್‌ಹ್ಯಾಂಡ್ ಹೊಡೆತದ ಮೂಲಕ ಒಂದು ಪಾಯಿಂಟ್ ಪಡೆದರು. 27 ವರ್ಷದ ಮುಚೋವಾ, ಬ್ಯಾಕ್‌ಹ್ಯಾಂಡ್ ಹೊಡೆತದಲ್ಲಿ ವಿಫಲರಾದಾಗ ಮ್ಯಾಚ್ ಪಾಯಿಂಟ್ ಪಡೆದ ಗಾಫ್ ಮುಷ್ಟಿ ಬಿಗಿಹಿಡಿದು ಸಂಭ್ರಮಿಸಿದರು.
ಕೊಕೊ ಗೆಲುವಿನ ಹತ್ತಿರ ಸಾಗುವಾಗ ಪ್ರೇಕ್ಷಕರ ಹರ್ಷೋದ್ಗಾರ ಅತಿಯಾಗಿ ಚೇರ್ ಅಂಪೈರ್ ಅಲಿಸನ್ ಹ್ಯೂಸ್ ಅವರು ಸಮಾಧಾನ ವಹಿಸುವಂತೆ ಪದೇ ಪದೇ ಹೇಳಬೇಕಾಯಿತು. ಈ ಪಂದ್ಯದ ವೇಳೆ ಸೆಕೆ ಉಳಿದ ದಿನಗಳಿಗಿಂತ ಸ್ವಲ್ಪ ಕಡಿಮೆಯಾಗಿತ್ತು.
ಇನ್ನೊಂದು ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾ ಹಿನ್ನಡೆಯಿಂದ ಚೇತರಿಸಿ 0–6, 7–6 (1), 7–6 (10–5) ರಿಂದ 2017ರ ರನ್ನರ್ ಅಪ್ ಮ್ಯಾಡಿಸನ್ ಕೀಸ್ ಅವರನ್ನು ಸೋಲಿಸಿದರು. ಉತ್ತಮ ಹೋರಾಟದ ಈ ಪಂದ್ಯ ಗುರುವಾರ ಮಧ್ಯರಾತ್ರಿಯ ನಂತರವಷ್ಟೇ ಮುಗಿಯಿತು.
ಒಂದು ಹಂತದಲ್ಲಿ ಮೊದಲ ಸೆಟ್ ಗೆದ್ದ ಕೀಸ್ ಎರಡನೇ ಸೆಟ್‌ನಲ್ಲಿ 5–3 ಮುಂದಿದ್ದು ಗೆಲುವಿನ ಅಂಚಿನಲ್ಲಿದ್ದರು. ಆದರೆ ಸತತವಾಗಿ 12 ಪಾಯಿಂಟ್ ಗಳಿಸಿದ ಸಬಲೆಂಕಾ ಪುನರಾಗಮನ ಮಾಡಿದರು.
ಸಬಲೆಂಕಾ ಈ ವರ್ಷ ಗ್ರ್ಯಾನ್‌ಸ್ಲಾಮ್‌ನಲ್ಲಿ 23–2 ಗೆಲುವಿನ ದಾಖಲೆ ಹೊಂದಿದ್ದಾರೆ. ಅವರು ಮುಂದಿನ ವಾರ ಮೊದಲ ಸಲ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಪಟ್ಟಕ್ಕೇರುವುದೂ ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.