ನ್ಯೂಯಾರ್ಕ್: ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಸೋಮವಾರ ರಾತ್ರಿ ನಡೆದ ದೀರ್ಘ ಪಂದ್ಯದಲ್ಲಿ 6–4, 3–6, 6–2, 4–6, 6–3 ರಿಂದ ಆರನೇ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಅಮೆರಿಕ ಓಪನ್ ಕ್ವಾರ್ಟರ್‌ಫೈನಲ್ ತಲುಪಿದರು.
ಈ ಟೂರ್ನಿಯ ಮಾಜಿ ರನ್ನರ್ ಅಪ್ ಆಗಿರುವ ಜ್ವರೇವ್ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಪಿಯನ್ ಹಾಗೂ ಅಗ್ರ ಶ್ರೇಯಾಂಕದ ಆಟಗಾರ ಕಾರ್ಲೊಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ. ಉತ್ತಮ ಲಯದಲ್ಲಿರುವ ಜರ್ಮನಿಯ ಆಟಗಾರ, ಅಮೋಘ ಓಟವನ್ನು ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಪಾದದ ನೋವಿನಿಂದ 2022ರಲ್ಲಿ ಅವರು ಕೆಲವು ಟೂರ್ನಿಗಳಲ್ಲಿ ಆಡಿರಲಿಲ್ಲ.
ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ, ಬಾಲ್ಯಕಾಲದಿಂದ ಸ್ನೇಹಿತರಾಗಿರುವ ರಷ್ಯಾದ ಡೇನಿಯಲ್ ಮೆಡ್ವೆಡೇವ್ ಮತ್ತು ಆ್ಯಂಡ್ರಿ ರುಬ್ಲೇವ್ ಎದುರಾಗಲಿದ್ದಾರೆ. ನಮ್ಮಿಬ್ಬರ ಮಧ್ಯೆ ನೈಜ ಹೋರಾಟ ನಡೆಯಲಿದೆ. ಫಲಿತಾಂಶ ಏನೇ ಆದರೂ, ನಮ್ಮಿಬ್ಬರ ಸ್ನೇಹಕ್ಕೆ ಯಾವುದೇ ಸಮಸ್ಯೆಯಾಗದು ಎಂದು ಮೆಡ್ವೆಡೇವ್ ಹೇಳಿದ್ದಾರೆ.
2021ರಲ್ಲಿ ಚಾಂಪಿಯನ್ ಆಗಿದ್ದ ಮೆಡ್ವೆಡೇವ್ ನಾಲ್ಕನೇ ಸುತ್ತಿನಲ್ಲಿ 2–6, 6–4, 6–1, 6–2 ರಿಂದ ಆಸ್ಟ್ರೇಲಿಯಾದ ಆಟಗಾರ, 13ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್ ವಿರುದ್ಧ ಜಯಗಳಿಸಿದರು. ಇನ್ನೊಂದು ಪಂದ್ಯದಲ್ಲಿ ರುಬ್ಲೇವ್ 6–3, 3–6, 6–3, 6–4 ರಿಂದ ಬ್ರಿಟನ್‌ನ ಜಾಕ್ ಡ್ರೇಪರ್ ಅವರನ್ನು ಹಿಮ್ಮೆಟ್ಟಿಸಿ ಎಂಟರ ಘಟ್ಟಕ್ಕೆ ತಲುಪಿದರು.
ರಷ್ಯಾದ ಈ ಇಬ್ಬರು ಆಟಗಾರರು ಈ ಹಿಂದೆ ಪ್ರಮುಖ ಟೂರ್ನಿಗಳಲ್ಲಿ ಏಳು ಬಾರಿ ಮುಖಾಮುಖಿ ಆಗಿದ್ದು, ಮೆಡ್ವೆಡೇವ್ ಐದು ಸಲ ಜಯಗಳಿಸಿದ್ದಾರೆ. ಕೊನೆಯ ಬಾರಿ, ಈ ವರ್ಷ ದುಬೈ ಓಪನ್‌ನಲ್ಲಿ ಎದುರಾಗಿದ್ದಾಗ ಮೆಡ್ವಡೇವ್ ಅವರೇ ಜಯಶಾಲಿ ಆಗಿದ್ದರು.
ಸೆಮಿಫೈನಲ್‌ಗೆ ಗಾಫ್: ಅಮೆರಿಕದ ಕೊಕೊ ಗಾಫ್, ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 6–0, 6–2 ರಿಂದ ಎಲೆನಾ ಒಸ್ಟಪೆಂಕೊ ವಿರುದ್ಧ ಜಯಿಸಿದರು. ಕೇವಲ 1 ಗಂಟೆ 8 ನಿಮಿಷಗಳಲ್ಲಿ ಗೆದ್ದ ಅವರು ಇದೇ ಮೊದಲ ಬಾರಿ ನಾಲ್ಕರಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.