ADVERTISEMENT

ಡೇವಿಸ್ ಕಪ್: ಭಾರತಕ್ಕೆ ಮಣಿದ ಪಾಕಿಸ್ತಾನ

ವಿಶ್ವ ಪ್ರಥಮ ಗುಂಪಿಗೆ ಭಾರತ ಪ್ರವೇಶ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 4:30 IST
Last Updated 5 ಫೆಬ್ರುವರಿ 2024, 4:30 IST
<div class="paragraphs"><p>ಭಾರತ ತಂಡದ ಆಟಗಾರರು ಹಾಗೂ ತರಬೇತುದಾರರು</p></div>

ಭಾರತ ತಂಡದ ಆಟಗಾರರು ಹಾಗೂ ತರಬೇತುದಾರರು

   

(ಚಿತ್ರ ಕೃಪೆ–ಪಿಟಿಐ)

ಇಸ್ಲಾಮಾಬಾದ್ (ಪಿಟಿಐ): ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಜೋಡಿಗೆ ನಿರಾಯಾಸ ಜಯ ಹಾಗೂ ನಿಕಿ ಪೂಣಚ್ಚ ಅವರ ಚೊಚ್ಚಲ ಗೆಲುವಿನೊಂದಿಗೆ ಭಾರತ ಡೇವಿಸ್ ಕಪ್ ತಂಡ ಭಾನುವಾರ ಪಾಕಿಸ್ತಾನವನ್ನು  4–0 ಅಂತರದಿಂದ ಸೋಲಿಸಿತು.

ADVERTISEMENT

60 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಭಾರತ ಡೇವಿಸ್ ಕಪ್ ತಂಡ ವಿಶ್ವ ‍ಪ್ರಥಮ ಗುಂಪಿನಲ್ಲಿ ಸ್ಥಾನ ಪಡೆದಿದೆ. 

ಡಬಲ್ಸ್ ವಿಭಾಗದಲ್ಲಿ ಭಾಂಬ್ರಿ ಮತ್ತು ಮೈನೇನಿ ಜೋಡಿ 6-2, 7-6 (5) ಸೆಟ್‌ಗಳಿಂದ ಮುಝಾಮಿಲ್‌ ಮುರ್ತಾಝ ಮತ್ತು ಅಖೀಲ್ ಖಾನ್ ಅವರನ್ನು ಮಣಿಸಿ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಪ್ರಾಬಲ್ಯ  ವಿಸ್ತರಿಸಿತು.

ಬಕರ್ತ್‌ ಉಲ್ಲಾ ಬದಲಿಗೆ ಅಖೀಲ್ ಖಾನ್ ಕಣಕ್ಕಿಳಿದಿದ್ದರು.  ‘ಮಾಡು ಇಲ್ಲವೇ ಮಡಿ’ ಪಂದ್ಯವಾಗಿದ್ದರಿಂದ  ಅನುಭವಿ ಆಟಗಾರನನ್ನು ಕಣಕ್ಕಿಳಿಸುವ ಯೋಜನೆ ಮಾಡಿತ್ತು. ಒಂದೊಮ್ಮೆ ಪಂದ್ಯ ಸೋತಿದ್ದರೆ ಭಾರತದ ಹಾದಿ ಕಠಿಣವಾಗುತ್ತಿತ್ತು. ಆದರೆ, ಭಾಂಬ್ರಿ ಮತ್ತು ಮೈನೇನಿ ಪ್ರಬಲ ಹೋರಾಟ ಮಾಡಿದರು.

ಮೈನೇನಿ ಅವರ ಪ್ರಬಲ ಸರ್ವ್‌ಗಳು ಆತಿಥೇಯ ತಂಡಕ್ಕೆ ಭಾರಿ ಹೊಡೆತ ನೀಡಿದವು.  ಅವರು ತನ್ನ ಸರ್ವ್‌ನಲ್ಲಿ ಒಂದೂ ಪಾಯಿಂಟ್ ಕಳೆದುಕೊಳ್ಳಲಿಲ್ಲ ಮತ್ತು ನೆಟ್‌ ಬಳಿಯ ಆಟದಲ್ಲಿಯೂ ಉತ್ತಮವಾಗಿ ಆಡಿದರು.  ಭಾರತ ಆಟಗಾರರು ಉತ್ತಮ ರಿಟರ್ನ್‌ಗಳನ್ನು ನೀಡಿದರು.

28ರ ವರ್ಷದ ನಿಕಿ ಪೂಣಚ್ಚ ಅವರು ಮೊಹಮ್ಮದ್ ಶೋಯೆಬ್ ಅವರನ್ನು 6-3, 6-4ರ ನೇರ ಸೆಟ್‌ಗಳಿಂದ ಸೋಲಿಸಿದರು.

ಶೋಯೆಬ್ ತನ್ನ ಸರ್ವ್‌ನಲ್ಲಿ ಹೆಣಗಾಡಿದರು ಹಾಗೂ ತಪ್ಪುಗಳನ್ನು ನಿಯಂತ್ರಿಸಲು ಪರದಾಡಿದರು. ಎದುರಾಳಿ ಸುಲಭವಾಗಿ ಪಾಯಿಂಟ್ಸ್‌ ಗಳಿಸಲು ಅವಕಾಶ ನೀಡಿದರು. 

ಡೇವಿಸ್ ಕಪ್ ಟೂರ್ನಿಯಲ್ಲಿ ಇದು ಭಾರತಕ್ಕೆ ಎಂಟನೇ ಜಯವಾಗಿದೆ.  ಟೆನಿಸ್ ವಿಶ್ವಕಪ್‌ ಎಂದೇ ಹೇಳಲಾಗುವ ಈ ಟೂರ್ನಿಯ ವಿಶ್ವ ಪ್ರಥಮ ಗುಂಪಿಗೆ ಭಾರತ ಅರ್ಹತೆ ಗಿಟ್ಟಿಸಿದೆ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಥಮ ಗುಂಪಿನ ಸ್ಪರ್ಧೆ ನಡೆಯಲಿದೆ. ಪಾಕ್ ತಂಡವು ಎರಡನೇ ಗುಂಪಿನಲ್ಲಿ ಇರಲಿದೆ.

‘ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿದ್ದವು. ಅದ್ಭುತ ಆತಿಥ್ಯ ವಹಿಸಿದ್ದಕ್ಕಾಗಿ ಪಾಕಿಸ್ತಾನ ಟೆನಿಸ್ ಫೆಡರೇಷನ್‌ಗೆ ಧನ್ಯವಾದಗಳು’ ಎಂದು ಭಾರತ ತಂಡದ ಆಟವಾಡದ ನಾಯಕ ಜೀಶಾನ್ ಅಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.