ಲಿಲೆ, ಫ್ರಾನ್ಸ್: ಕ್ರೊವೇಷ್ಯಾ ತಂಡದವರು ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್‌ನಲ್ಲಿ ಕ್ರೊವೇಷ್ಯಾ 3–1ರಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಸೋಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಎರಡನೇ ಸಲ ಟ್ರೋಫಿ ಗೆದ್ದ ಹಿರಿಮೆಗೆ ಭಾಜನವಾಯಿತು. ಈ ತಂಡ 2005ರಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು.
ಶುಕ್ರವಾರ ನಡೆದಿದ್ದ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಗೆದ್ದಿದ್ದ ಕ್ರೊವೇಷ್ಯಾ ತಂಡ ಶನಿವಾರ ಜರುಗಿದ್ದ ಡಬಲ್ಸ್ ವಿಭಾಗದ ಹಣಾಹಣಿಯಲ್ಲಿ ಸೋತಿತ್ತು. ಹೀಗಾಗಿ ಭಾನುವಾರ ನಡೆದ ರಿವರ್ಸ್ ಸಿಂಗಲ್ಸ್ ಪಂದ್ಯ ಕುತೂಹಲದ ಗಣಿಯಾಗಿತ್ತು.
ಈ ಹೋರಾಟದಲ್ಲಿ ಮರಿನ್ ಸಿಲಿಚ್ 7–6, 6–3, 6–3ರಲ್ಲಿ ಲುಕಾಸ್ ಪೌವಿಲ್ ಅವರನ್ನು ಪರಾಭವಗೊಳಿಸಿ ಕ್ರೊವೇಷ್ಯಾ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು. ಈ ಹೋರಾಟ ಎರಡು ಗಂಟೆ 19 ನಿಮಿಷ ನಡೆಯಿತು.
ಮೊದಲ ಸೆಟ್‌ನಲ್ಲಿ ಸಿಲಿಚ್ ಮತ್ತು ಲುಕಾಸ್ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಇಬ್ಬರೂ ಸರ್ವ್ ಕಾಪಾಡಿಕೊಂಡಿದ್ದರಿಂದ 6–6ರ ಸಮಬಲ ಕಂಡುಬಂತು. ‘ಟೈ ಬ್ರೇಕರ್’ನಲ್ಲಿ ದಿಟ್ಟ ಆಟ ಆಡಿದ ಸಿಲಿಚ್ ಸಂಭ್ರಮಿಸಿದರು.
ಎರಡು ಮತ್ತು ಮೂರನೇ ಸೆಟ್‌ಗಳಲ್ಲೂ ಸಿಲಿಚ್ ಅಬ್ಬರಿಸಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಅವರು ಆಕರ್ಷಕ ಡ್ರಾಪ್ ಮತ್ತು ಕ್ರಾಸ್‌ಕೋರ್ಟ್ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.
‘13 ವರ್ಷಗಳ ನಂತರ ಡೇವಿಸ್ ಕಪ್ ಗೆದ್ದಿರುವುದು ಹೆಮ್ಮೆಯ ವಿಷಯ. ತಂಡದಲ್ಲಿರುವ ಎಲ್ಲರ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಸಿಲಿಚ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.