ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಮಗದೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.
ಪುರುಷರ ಸಿಂಗಲ್ಸ್ ಮೂರನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್, 24 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್‌ಗೆ ಆಘಾತಕಾರಿ ಸೋಲು ಎದುರಾಗಿದ್ದು, ಕೂಟದಿಂದಲೇ ನಿರ್ಗಮಿಸಿದ್ದಾರೆ.
ಎರಡನೇ ಶ್ರೇಯಾಂಕಿತ ಜೊಕೊವಿಚ್ ಅವರು 28ನೇ ಶ್ರೇಯಾಂಕದ ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್ ವಿರುದ್ಧ 6-4, 6-4, 2-6, 6-4ರ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.
ಇದರೊಂದಿಗೆ ವೃತ್ತಿ ಜೀವನದ 25ನೇ ಗ್ರ್ಯಾನ್‌ಸ್ಲಾಮ್ ಹಾಗೂ ಐದನೇ ಅಮೆರಿಕ ಓಪನ್ ಗೆಲ್ಲುವ ಜೊಕೊವಿಚ್ ಕನಸು ಭಗ್ನಗೊಂಡಿದೆ.
ಅಲ್ಲದೆ 2017ರ ಬಳಿಕ ಮೊದಲ ಬಾರಿಗೆ ಋತುವೊಂದರಲ್ಲಿ (2024) ಒಂದೇ ಒಂದು ಗ್ರ್ಯಾನ್‌ಸ್ಲಾಮ್ ಗೆಲ್ಲುವಲ್ಲಿ ಜೊಕೊವಿಚ್ ವಿಫಲರಾಗಿದ್ದಾರೆ.
ಅಷ್ಟೇ ಯಾಕೆ, 2024ನೇ ವರ್ಷ ಆಧುನಿಕ ಟೆನಿಸ್ ಲೋಕದ ತ್ರಿವಳಿ ತಾರೆಗಳಾದ ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಚ್ ಅವರ ಪೈಕಿ ಯಾರೊಬ್ಬರಿಗೂ 2002ನೇ ಇಸವಿಯ ಬಳಿಕ ಗ್ರ್ಯಾನ್‌ಸ್ಲಾಮ್ ಗೆಲ್ಲಲು ಸಾಧ್ಯವಾಗದ ವರ್ಷ ಎಂದೆನಿಸಿದೆ.
37 ವರ್ಷದ ಜೊಕೊವಿಚ್ 2011, 2015, 2018 ಮತ್ತು 2023ರಲ್ಲಿ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಕಿರೀಟ ಗೆದ್ದಿದ್ದರು.
ಈಗಾಗಲೇ ಆಘಾತಕಾರಿ ಸೋಲು ಕಂಡಿರುವ ಸ್ಪೇನ್‌ನ ಯುವ ತಾರೆ ಕಾರ್ಲೋಸ್ ಅಲ್ಕರಾಜ್ ಸಹ ಕೂಟದಿಂದಲೇ ಹೊರಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.