ನ್ಯೂಯಾರ್ಕ್: ಅರ್ಜೆಂಟೀನಾದ ವುವಾನ್ ಡೆಲ್ ಪೊಟ್ರೊ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ತಡರಾತ್ರಿ ಅರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಫೆಲ್ ನಡಾಲ್ ವಿರುದ್ಧ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಡೆಲ್ ಪೊಟ್ರೊ 7–6, 6–2ರಿಂದ ಮುನ್ನಡೆ ಸಾಧಿಸಿದ್ದರು. ಅದೇ ವೇಳೆ ತೀವ್ರ
ಮಂಡಿ ನೋವಿನಿಂದಾಗಿ ನಡಾಲ್ ನಿವೃತ್ತಿಯಾಗಬೇಕಾಯಿತು. ಹೀಗಾಗಿ ಡೆಲ್ ಪೊಟ್ರೊ ಅವರನ್ನು ಪಂದ್ಯದ ವಿಜೇತ ಎಂದು ಘೋಷಿಸಲಾಯಿತು.
ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನ ಹೊಂದಿರುವ ನಡಾಲ್ ಹಾಗೂ ಡೆಲ್ ಪೊಟ್ರೊ ಅವರ ನಡುವಿನ ಪಂದ್ಯವು ಎರಡು ಗಂಟೆ ನಡೆಯಿತು. ಟೆನಿಸ್ ಪ್ರಿಯರಿಂದ ಕಿಕ್ಕಿರಿದು ತುಂಬಿದ್ದ
ಕ್ರೀಡಾಂಗಣದಲ್ಲಿ ಉಭಯ ಆಟಗಾರರು ಮೊದಲ ಸೆಟ್‌ನಿಂದಲೂ ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಧೀರ್ಘ ರ‍್ಯಾಲಿ, ಮನಮೋಹಕ ಫೋರ್ ಹ್ಯಾಂಡ್, ಬ್ಯಾಕ್‌ಹ್ಯಾಂಡ್ ಹಾಗೂ ಬೇಸ್‌ಲೈನ್ ಹೊಡೆತಗಳು ಪಂದ್ಯಕ್ಕೆ ಮೆರುಗು ತಂದುಕೊಟ್ಟವು. ಟೈ ಬ್ರೇಕರ್ ಹಂತಕ್ಕೆ ಹೋದ ಸೆಟ್ ಅನ್ನು ಡೆಲ್ ಪೊಟ್ರೊ ತಮ್ಮದಾಗಿಸಿಕೊಂಡರು.
ಇದೇ ವೇಳೆ ಮೆಡಿಕಲ್ ಟೈಮ್‌ಔಟ್ ತೆಗೆದುಕೊಂಡ ಸ್ಪೇನ್‌ನ ಆಟಗಾರ ತಮ್ಮ ಬಲಗಾಲಿನ ಮಂಡಿಗೆ ಚಿಕಿತ್ಸೆ ಪಡೆದುಕೊಂಡರು. ಎರಡನೇ ಸೆಟ್‌ನ ಆರಂಭದಿಂದಲೂ ಡೆಲ್ ಪೊಟ್ರೊ ಅವರು ಮುನ್ನಡೆ ಸಾಧಿಸಿದರು. ನೋವಿನಿಂದಾಗಿ ನಡಾಲ್ ಅವರ ಆಟ ಸಪ್ಪೆಯಾಯಿತು. ಅರ್ಜೆಂಟೀನಾದ ಆಟಗಾರ ಸುಲಭವಾಗಿ ಸೆಟ್ ಜಯಿಸಿದರು. ನೋವಿನ ಸಮಸ್ಯೆಯಿಂದಾಗಿ ಆಟ ಮುಂದುವರಿಸದಿರಲುನಡಾಲ್ ನಿರ್ಧರಿಸಿದರು.
ಪಂದ್ಯದ ನಂತರ ಮಾತನಾಡಿದ ರಫೆಲ್, ‘ಮಂಡಿಯಲ್ಲಿ ಬಹಳ ನೋವಿದೆ. ಸಹಜ ಆಟವಾಡಲು ಸಾಧ್ಯವಾಗಲಿಲ್ಲ. ನಿವೃತ್ತಿಯ ನಿರ್ಧಾರ ಅನಿವಾರ್ಯವಾಗಿತ್ತು’ ಎಂದು ಹೇಳಿದರು.
‘ರಫೆಲ್ ಅಪ್ರತಿಮ ಹೋರಾಟಗಾರ. ಅವರ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಪಂದ್ಯ ಆಡಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಫೈನಲ್ ಪ್ರವೇಶಿಸಿದ್ದಕ್ಕೆ ಸಂತಸವಾಗುತ್ತಿದೆ’ ಎಂದು ಇದೇ ವೇಳೆ ಡೆಲ್ ಪೊಟ್ರೊ ಹೇಳಿದರು.
ಈ ಟೂರ್ನಿಯ ಮೂರನೇ ಸುತ್ತಿನಿಂದಲೂ ನಡಾಲ್ ಧೀರ್ಘಾವಧಿಯ ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಕಚನೋವ್ ವಿರುದ್ಧ 4 ಗಂಟೆ 23 ನಿಮಿಷ ನಡೆದ ಮೂರನೇ ಸುತ್ತಿನ ಪಂದ್ಯದ ವೇಳೆ ಅವರುಮಂಡಿ ನೋವಿಗೆ ಒಳಗಾಗಿದ್ದರು. ನಿಕೊಲಾಸ್ ಬಸಿಲಾಶ್ವಿಲಿ ವಿರುದ್ಧದ ನಾಲ್ಕನೇ ಸುತ್ತಿನ ಪಂದ್ಯವೂ 3 ಗಂಟೆ 19 ನಿಮಿಷ ನಡೆದಿತ್ತು. ಎರಡು ದಿನಗಳ ಹಿಂದೆ ಡಾಮಿನಿಕ್ ಥೀಮ್ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್‌ಹಣಾಹಣಿಯು 4 ಗಂಟೆ 49 ನಿಮಿಷ ನಡೆದಿತ್ತು. ಸತತಮೂರು ಮ್ಯಾರಥಾನ್ ಹೋರಾಟಗಳು ನಡಾಲ್ ಅವರ ಮಂಡಿ ನೋವನ್ನು ಹೆಚ್ಚಿಸಿದ್ದವು.
ನೊವಾಕ್‌ಗೆ ಜಯ
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಅವರು 6–3, 6–4, 6–2ರಿಂದ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಗೆದ್ದರು.
ಇದೇ ಟೂರ್ನಿಯಲ್ಲಿ ಎಂಟನೇ ಬಾರಿಗೆ ಜೊಕೊವಿಚ್ ಅವರು ಫೈನಲ್ ಪ್ರವೇಶಿಸಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಜೊಕೊವಿಚ್ ಹಾಗೂ ಡೆಲ್ ಪೊಟ್ರೊ ಸೆಣಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.