ಲಂಡನ್: ಸರ್ಬಿಯದ ನೊವಾಕ್ ಜೊಕೊವಿಚ್ ಅವರು ಈ ವರ್ಷದ ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯೊಂದಿಗೆ ಸೋಮವಾರ ಇಲ್ಲಿ ಆರಂಭವಾಗಲಿರುವ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಫ್ರೆಂಚ್ ಓಪನ್ ಜಯಿಸಿ ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್ ಗೆದ್ದ ಆತ್ಮವಿಶ್ವಾಸದಲ್ಲಿರುವ ಅವರು ಮೊದಲ ಸುತ್ತಿನಲ್ಲಿ 67ನೇ ರ್‍ಯಾಂಕ್‌ನ ಆಟಗಾರ ಅರ್ಜೆಂಟೀನಾದ ಪೆಡ್ರಿ ಕಾಚಿನ್ ವಿರುದ್ಧ ಹಣಾಹಣಿ ನಡೆಸುವರು.
36 ವರ್ಷದ ಜೊಕೊವಿಚ್ ಅವರು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಏಳು ಸಲ ಚಾಂಪಿಯನ್ ಆಗಿದ್ದಾರೆ. ಈ ಬಾರಿ ಕಿರೀಟ ಮುಡಿಗೇರಿಸಿದರೆ, ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರ ಎಂಟು ಪ್ರಶಸ್ತಿಗಳ ದಾಖಲೆ ಸರಿಗಟ್ಟಲಿದ್ದಾರೆ.
ಋತುವಿನ ಎಲ್ಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸುವ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಸರ್ಬಿಯದ ಆಟಗಾರನಿಗೆ ಇಲ್ಲಿ ಗೆಲುವು ಅನಿವಾರ್ಯ. ಅವರು ಈಗಾಗಲೇ ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಗೆದ್ದಿದ್ದಾರೆ. ರಾಡ್ ಲೇವರ್ (1969 ರಲ್ಲಿ) ಬಳಿಕ ಯಾರೂ ಒಂದೇ ವರ್ಷ ಎಲ್ಲ ನಾಲ್ಕೂ ಗ್ರ್ಯಾನ್‌ಸ್ಲಾಮ್ ಜಯಿಸಿದ ಸಾಧನೆ ಮಾಡಿಲ್ಲ.
ಜೊಕೊವಿಚ್‌ಗೆ ಅಗ್ರಶ್ರೇಯಾಂಕದ ಆಟಗಾರ ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಕಳೆದ ವಾರ ಲಂಡನ್‌ನಲ್ಲಿ ನಡೆದಿದ್ದ ಕ್ವೀನ್ಸ್ ಟೆನಿಸ್ ಟೂರ್ನಿ ಗೆದ್ದಿರುವ ಅಲ್ಕರಾಜ್, ತಕ್ಕ ತಯಾರಿಯೊಂದಿಗೆ ವಿಂಬಲ್ಡನ್‌ನಲ್ಲಿ ಆಡಲಿದ್ದಾರೆ.
ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಜೊಕೊವಿಚ್ ಕೈಯಲ್ಲಿ ಎದುರಾದ ಸೋಲಿಗೆ ಮುಯ್ಯಿ ತೀರಿಸುವ ಲೆಕ್ಕಾಚಾರವನ್ನು ಅಲ್ಕರಾಜ್ ಹೊಂದಿದ್ಧಾರೆ.
ಆತ್ಮವಿಶ್ವಾಸದಲ್ಲಿ ಶ್ವಾಂಟೆಕ್: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಪೋಲೆಂಡ್‌ನ ಇಗಾ ಶ್ವಾಂಟೆಕ್, ಮೊದಲ ಸುತ್ತಿನಲ್ಲಿ ಚೀನಾದ ಝು ಲಿನ್ ಅವರ ಸವಾಲು ಎದುರಿಸಲಿದ್ದಾರೆ.
ಫ್ರೆಂಚ್ ಓಪನ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಶ್ವಾಂಟೆಕ್ ಅವರಿಗೆ ಅರಿನಾ ಸಬಲೆಂಕಾ, ಎಲೆನಾ ರಿಬಾಕಿನಾ ಮತ್ತು ಆನ್ಸ್ ಜಬೇರ್ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.
ವೀನಸ್ ಕಣಕ್ಕೆ: 43 ವರ್ಷದ ಆಟಗಾರ್ತಿ ಅಮೆರಿಕದ ವೀನಸ್ ವಿಲಿಯಮ್ಸ್ ಅವರು ಮತ್ತೆ ವಿಂಬಲ್ಡನ್‌ನಲ್ಲಿ ಆಡಲಿರುವುದು ಕುತೂಹಲ ಮೂಡಿಸಿದೆ. ವೀನಸ್ 26 ವರ್ಷಗಳ ಹಿಂದೆ ಇಲ್ಲಿ ಪದಾರ್ಪಣೆ ಮಾಡಿದ್ದರು. ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿರುವ ಅವರು ಮೊದಲ ಸುತ್ತಿನಲ್ಲಿ ಎಲಿನಾ ಸ್ವಿಟೊಲಿನಾ ಅವರ ಸವಾಲು ಎದುರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.