ADVERTISEMENT

ಎಟಿಪಿ ಫೈನಲ್ಸ್ ಟೂರ್ನಿ: ಫೆಡರರ್ ದಾಖಲೆಯತ್ತ ನೊವಾಕ್ ಹೆಜ್ಜೆ

ಸಿಟ್ಸಿಪಾಸ್, ರುಬ್ಲೆವ್ ಕಾಸ್ಪರ್ ರೂಡ್ ಸವಾಲು

ಏಜೆನ್ಸೀಸ್
Published 12 ನವೆಂಬರ್ 2021, 16:31 IST
Last Updated 12 ನವೆಂಬರ್ 2021, 16:31 IST
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ   

ರೋಮ್: ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ದಾಖಲೆ ಮುರಿಯುವತ್ತ ಚಿತ್ತ ನೆಟ್ಟಿರುವ ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರು ಮುಂದಿನ ವಾರ ಆರಂಭವಾಗಲಿರುವ ಎಟಿಪಿ ಟೂರ್ನಿಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ವರ್ಷದ ಎಲ್ಲ ನಾಲ್ಕು ಗ್ರ್ಯಾಂಡ್‌ಸ್ಲಾಂ ಟೂರ್ನಿಗಳ ಚಾಂಪಿಯನ್ ಆಗುವತ್ತ ಹೆಜ್ಜೆ ಇರಿಸಿದ್ದ ಜೊಕೊವಿಚ್ ಕೊನೆಗೆ ವೈಫಲ್ಯ ಕಂಡಿದ್ದರು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕನಸು ಕೂಡ ನನಸು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ವಿಶ್ವ ಕ್ರಮಾಂಕದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿರುವ ಅವರು ಸತತ ಏಳನೇ ಬಾರಿ ಮೊದಲ ಸ್ಥಾನದಲ್ಲಿ ಮುಂದುವರಿದು ದಾಖಲೆ ನಿರ್ಮಿಸಿದ್ದರು.

ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಜೊಕೊವಿಚ್ ಅಮೆರಿಕ ಓಪನ್‌ನಲ್ಲಿ ಮುಗ್ಗರಿಸಿದ್ದರು. ಫೈನಲ್‌ನಲ್ಲಿ ಅವರನ್ನು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಮಣಿಸಿದ್ದರು. ಆದರೆ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರ ದಾಖಲೆ ಸಮಗಟ್ಟಲು ಅವರಿಗೆ ಸಾಧ್ಯವಾಗಿತ್ತು. ಮೂವರು ಕೂಡ 20 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಅಮೆರಿಕ ಓಪನ್‌ನಲ್ಲಿ ಜಯಿಸಿದ್ದರೆ 21 ಪ್ರಶಸ್ತಿಗಳನ್ನು ಗೆದ್ದ ದಾಖಲೆ ಅವರದಾಗುತ್ತಿತ್ತು.

ADVERTISEMENT

ಈಗ ಫೆಡರರ್ ಅವರ ಮತ್ತೊಂದು ದಾಖಲೆಯನ್ನು ಸಮಗಟ್ಟುವ ಕನಸು ಹೊತ್ತುಕೊಂಡು ಜೊಕೊವಿಚ್ ಕಣಕ್ಕೆ ಇಳಿಯಲಿದ್ದಾರೆ. ಎಟಿಪಿ ಫೈನಲ್ಸ್‌ನ ಆರು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಫೆಡರರ್ ದಾಖಲೆ ಹೊಂದಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಡ್ಯಾನಿಯಲ್ ಮೆಡ್ವೆಡೆವ್ ಅವರನ್ನು ಕಳೆದ ವಾರ ನಡೆದ ಪ್ಯಾರಿಸ್ ಮಾಸ್ಟರ್ಸ್‌ ಫೈನಲ್‌ನಲ್ಲಿ ಸೋಲಿಸಿರುವ ಜೊಕೊವಿಚ್ ಈಗ ಭರವಸೆಯ ಅಲೆಯಲ್ಲಿದ್ದಾರೆ.

ಸ್ಟೆಫನೊಸ್ ಸಿಟ್ಸಿಪಾಸ್, ಆ್ಯಂಡ್ರೆ ರುಬ್ಲೆವ್ ಮತ್ತು ಕಾಸ್ಪರ್ ರೂಡ್ ಅವರೊಂದಿಗೆ ಹಸಿರು ಗುಂಪಿನಲ್ಲಿ ಜೊಕೊವಿಚ್ ಸ್ಥಾನ ಗಳಿಸಿದ್ದಾರೆ. ವಿಶ್ವದ ಅಗ್ರ ಕ್ರಮಾಂಕದ ಎಂಟು ಮಂದಿಯನ್ನು ತಲಾ ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು ಪ್ರತಿ ಗುಂಪಿನಿಂದ ಇಬ್ಬರು ಸೆಮಿಫೈನಲ್‌ಗೆ ಅರ್ಹತೆ ಗಳಿಸಲಿದ್ದಾರೆ.

2015ರಿಂದ ಈ ವರೆಗೆ ಜೊಕೊವಿಚ್ ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಲಿಲ್ಲ. ಈ ಬಾರಿ ಫೆಡರರ್ ಮತ್ತು ನಡಾಲ್ ಟೂರ್ನಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ಅವರ ಹಾದಿ ಸುಗಮವಾಗಿದೆ. ಪ್ರಶಸ್ತಿ ಗೆದ್ದು ವರ್ಷದ ಕೊನೆಯ ಟೂರ್ನಿಯನ್ನು ಸ್ಮರಣೀಯವಾಗಿಸಿಕೊಳ್ಳಲು ಅವರು ಪ್ರಯತ್ನಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.