ಜಿನಿವಾ: ‘ರೋಜರ್ ಈ ದಿನವನ್ನು ಒಪ್ಪಿಕೊಳ್ಳುವುದು ಬಹಳ ಕಠಿಣ ಮತ್ತು ಈ ಕ್ರೀಡೆಯಲ್ಲಿ ನಾವಿಬ್ಬರೂ ಹಂಚಿಕೊಂಡ ಕ್ಷಣಗಳನ್ನು ಪದಗಳಲ್ಲಿ ಕಟ್ಟಿಕೊಡುವುದು ಇನ್ನೂ ಕಠಿಣ’–ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಅವರು ತಮ್ಮ ‘ಗೆಳೆಯ’ ರೋಜರ್ ಫೆಡರರ್ ಅವರ ಕುರಿತು ಹೇಳಿದ ಮಾತಿದು. ಸ್ವಿಸ್ ಆಟಗಾರ ರೋಜರ್ ಗುರುವಾರ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದರು. ಮುಂಬರುವ ಲೆವರ್ ಕಪ್ ಟೆನಿಸ್ ಟೂರ್ನಿಯ ನಂತರ ವಿದಾಯ ಹೇಳುವುದಾಗಿ ಟ್ವೀಟ್ ಮಾಡಿದ್ದರು.
ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ನೊವಾಕ್, ‘ಕೋರ್ಟ್ ಹೊರಗೆ ಹಾಗೂ ಒಳಗೆ ತಮ್ಮ ಆಪ್ತಮಿತ್ರನಾಗಿರುವುದು ನನಗೆ ಸಂದಿರುವ ಗೌರವ’ ಎಂದಿದ್ದಾರೆ.
ನೊವಾಕ್ ಮತ್ತು ಫೆಡರರ್ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 17 ಬಾರಿ ಮುಖಾಮುಖಿಯಾಗಿದ್ದಾರೆ. ಅದರಲ್ಲಿ ಐದು ಫೈನಲ್‌ಗಳೂ ಸೇರಿವೆ. ಜೊಕೊವಿಚ್ 11–6ರಿಂದ ಮುನ್ನಡೆ ಸಾಧಿಸಿದ್ದಾರೆ.
‘ರೋಜರ್ ವೃತ್ತಿಪರ ಅವಧಿಯು ಈ ಕ್ರೀಡೆಗೆ ಒಂದು ಶ್ರೇಷ್ಠ ಲಯವನ್ನು ನೀಡಿದೆ. ಅದರಿಂದಾಗಿ ಘನತೆ ಹಾಗೂ ಉತ್ಕೃಷ್ಟತೆಗಳು ಹೆಚ್ಚಿವೆ’ ಎಂದು ನೊವಾಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.