ರೋಮ್: ಅಗ್ರ ಕ್ರಮಾಂಕದ ನೊವಾಕ್ ಜೊಕೊವಿಚ್ ಅವರು ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಸವಾಲನ್ನು ಮೀರಿ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಶನಿವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸರ್ಬಿಯಾ ಆಟಗಾರನಿಗೆ 4–6, 7–5, 7–5ರಿಂದ ಜಯ ಒಲಿಯಿತು.
ಜೊಕೊವಿಚ್ ಈ ಪಂದ್ಯ ಗೆಲ್ಲುವುದರೊಂದಿಗೆ ಇಟಾಲಿಯನ್ ಓಪನ್‌ನಲ್ಲಿ ಸತತ ಎಂಟನೇ ಬಾರಿ ನಾಲ್ಕರಘಟ್ಟ ತಲುಪಿದ ಸಾಧನೆ ಮಾಡಿದರು. ಇದರಲ್ಲಿ ಐದು ಬಾರಿ ಅವರು ಟ್ರೋಫಿ ಒಲಿಸಿಕೊಂಡಿದ್ದಾರೆ.
ಮೊದಲ ಸೆಟ್‌ನಲ್ಲಿ ಸೋತ ಬಳಿಕ ಪುಟಿದೆದ್ದ ಜೊಕೊವಿಚ್, ಗ್ರೀಸ್ ಆಟಗಾರರನ್ನು ಮಣಿಸುವಲ್ಲಿ ಯಶಸ್ವಿಯಾದರು. ಶುಕ್ರವಾರವೇ ಆರಂಭವಾಗಿದ್ದ ಈ ಪಂದ್ಯವನ್ನು ಮಳೆಯ ಕಾರಣ ಸ್ಥಗಿತಗೊಳಿಸಿ ಶನಿವಾರ ಆಡಿಸಲಾಯಿತು. ಶುಕ್ರವಾರ ಆಟ ನಿಂತಾಗ ಸಿಟ್ಸಿಪಾಸ್ ಅವರು ಎರಡನೇ ಸೆಟ್‌ನಲ್ಲಿ 2–1ರಿಂದ ಮುನ್ನಡೆಯಲ್ಲಿದ್ದರು.
ಸೆಮಿಫೈನಲ್‌ನಲ್ ಪಂದ್ಯದಲ್ಲಿ ಅವರು ಇಟಲಿಯ ಲೊರೆಂಜೊ ಸೋನೆಗೊ ಅವರನ್ನು ಎದುರಿಸುವರು.
ಎಂಟರಘಟ್ದದ ಮತ್ತೊಂದು ಹಣಾಹಣಿಯಲ್ಲಿ ಲೊರೆಂಜೊ ಅವರು 3–6, 6–4, 6–3ರಿಂದ ಏಳನೇ ರ‍್ಯಾಂಕ್‌ನ ಆ್ಯಂಡ್ರೆ ರುಬ್ಲೆವ್ ಅವರಿಗೆ ಸೋಲುಣಿಸಿ ಮಾಸ್ಟರ್ಸ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್ ತಲುಪಿದ್ದಾರೆ.
ಕ್ರೀಡಾಂಗಣ ಸಾಮರ್ಥ್ಯದ ಶೇಕಡ 25ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರು ಅಮೆರಿಕದ ರೇಲಿ ಒಪೆಲ್ಕಾ ಎದುರು ಸೆಣಸಲಿದ್ದಾರೆ.
ನಾಲ್ಕರ ಘಟ್ಟಕ್ಕೆ ಸ್ವಾಟೆಕ್: ಮಹಿಳೆಯರ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ, ಫ್ರೆಂಚ್ ಓಪನ್ ಚಾಂಪಿಯನ್ ಐಗಾ ಸ್ವಾಟೆಕ್ 6–2, 7–5ರಿಂದ ಎರಡು ಬಾರಿಯ ರೋಮ್ ಚಾಂಪಿಯನ್ ಎಲಿನಾ ಸ್ವಿಟೋಲಿನಾ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಅವರು ಅಮೆರಿಕದ ಕೊಕೊ ಗಫ್ ಎದುರು ಸೆಣಸುವರು.
ನಾಲ್ಕರ ಘಟ್ಟದ ಮತ್ತೊಂದು ಹಣಾಹಣಿ ಕರೋಲಿನಾ ಪ್ಲಿಸ್ಕೊವಾ–ಪೆಟ್ರಾ ಮಾರ್ಟಿಚ್ ನಡುವೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.