ಮೆಲ್ಬರ್ನ್: ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಇದರೊಂದಿಗೆ ದಿಗ್ಗಜ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಿದರು.
ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಅರಿನಾ ಸಬಲೆಂಕಾ ಹಾಗೂ ಕೊಕೊ ಗಾಫ್ ಅವರೂ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
ರಾಡ್ ಲೇವರ್ ಅರೇನಾದಲ್ಲಿ ಹತ್ತು ಬಾರಿಯ ಚಾಂಪಿಯನ್ ಜೊಕೊವಿಚ್ 6–0, 6–0, 6–3 ರಿಂದ ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಅವರನ್ನು ಸೋಲಿಸಿದರು. 1 ಗಂಟೆ 44 ನಿಮಿಷಗಳ ಸೆಣಸಾಟದಲ್ಲಿ ಜಯಿಸಿದರು. ಇದರೊಂದಿಗೆ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಒಟ್ಟಾರೆ 58ನೇ ಬಾರಿ ಎಂಟರ ಹಂತಕ್ಕೆ ಪ್ರವೇಶಿಸಿದರು. ಇದರೊಂದಿಗೆ ಫೆಡರರ್ ದಾಖಲೆ ಸಮ ಮಾಡಿದರು.
ಆಸ್ಟ್ರೇಲಿಯಾ ಓಪನ್‌ನಲ್ಲಿ ಅವರು 14ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ರಫೆಲ್ ನಡಾಲ್ ಮತ್ತು ಜಾನ್ ನ್ಯೂಕೊಂಬೆ ಅವರೊಂದಿಗೆ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ 7-6 (3), 5-7, 6-3, 6-3 ಸೆಟ್ ಗಳಿಂದ ಜಯಗಳಿಸಿ ಮೊದಲ ಬಾರಿಗೆ ಎಂಟರ ಘಟ್ಟಕ್ಕೆ ಪ್ರವೇಶಿಸಿರುವ 12ನೇ ಶ್ರೇಯಾಂಕದ ಅಮೆರಿಕದ ಟೇಲರ್ ಫ್ರಿಟ್ಜ್ ಅವರನ್ನು ಜೊಕೊವಿಚ್ ಎದುರಿಸಲಿದ್ದಾರೆ.
ದಾಖಲೆಯ 25ನೇ ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್, ‘ಮೊದಲ ಎರಡು ಸೆಟ್‌ಗಳಲ್ಲಿ ಉತ್ತಮವಾಗಿ ಆಡಿದೆ. ಮೊದಲ ಹಂತದಿಂದ ಕೊನೆಯವರೆಗೆ ಮೇಲುಗೈ ಸಾಧಿಸಿದೆ’ ಎಂದರು.
ಇತ್ತೀಚಿನ ದಿನಗಳಲ್ಲಿ ತಾವು ಅನಾರೋಗ್ಯದಿಂದ ಬಳಲಿದ್ದನ್ನು ಜೊಕೊವಿಚ್ ಒಪ್ಪಿಕೊಂಡಿದ್ದಾರೆ. ಆದರೆ ಈಗ ಆರೋಗ್ಯ ಸುಧಾರಿಸುತ್ತಿದೆ ಎಂದೂ ಹೇಳಿದರು.
ಮಹಿಳಾ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅರಿನಾ ಸೆಬಲೆಂಕಾ ಮತ್ತು ಅಮೆರಿಕ ಓಪನ್ ವಿಜೇತರಾದ ಕೊಕೊ ಗಾಫ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಕಳೆದ ವರ್ಷ ಇಲ್ಲಿ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದ 2ನೇ ಶ್ರೇಯಾಂಕಿತ ಆಟಗಾರ್ತಿ ಸಬಲೆಂಕಾ, ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು 6-3, 6-2 ಸೆಟ್ ಗಳಿಂದ ಸೋಲಿಸಿದರು. ಕೊಕೊ ಅವರು ಮ್ಯಾಗ್ಡಲೀನಾ ಫ್ರೆಚ್ ಅವರನ್ನು 6-1, 6-2 ಸೆಟ್‌ಗಳಿಂದ ಮಣಿಸಿದರು.
ಅನಿಸಿಮೊವಾ ತಮ್ಮ ಹಿಂದಿನ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಬೆಲಾರಸ್ ಆಟಗಾರ್ತಿಯ ಶಕ್ತಿಶಾಲಿ ಹೊಡೆತಗಳಿಗೆ ಪ್ರತ್ಯುತ್ತರ ಕೊಡುವಲ್ಲಿ ವಿಫಲರಾದರು.
ಮಾರಿಯಾ ಟೊಮಾಫೀವಾ (ರಷ್ಯಾ) ಅವರನ್ನು 6-2, 6-1 ಸೆಟ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಪ್ರಮುಖ ಕ್ವಾರ್ಟರ್ ಫೈನಲ್ ತಲುಪಿರುವ ಮಾರ್ಟಾ ಕೊಸ್ಟ್ಯುಕ್ (ಉಕ್ರೇನ್) ಅವರನ್ನು ಮುಂದಿನ ಪಂದ್ಯದಲ್ಲಿ ಕೊಕೊ ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.