ಟೋಕಿಯೊ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್, ಜಪಾನ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಸರ್ಬಿಯಾದ ಜೊಕೊವಿಚ್ 6–4, 6–2 ನೇರ ಸೆಟ್‌ಗಳಿಂದ ಅಲೆಕ್ಸಿ ಪೊಪಿರಿನ್ ಅವರನ್ನು ಪರಾಭವಗೊಳಿಸಿದರು.
ಅಮೆರಿಕ ಓಪನ್ ಟೂರ್ನಿಯ ವೇಳೆ ಭುಜದ ನೋವಿನಿಂದ ಬಳಲಿದ್ದ ನೊವಾಕ್, ಇದರಿಂದ ಚೇತರಿಸಿಕೊಂಡ ಬಳಿಕ ಆಡಿದ ಮೊದಲ ಪಂದ್ಯ ಇದಾಗಿತ್ತು. ಇದರಲ್ಲಿ ಅವರು ಒಟ್ಟು ಏಳು ಏಸ್‌ಗಳನ್ನು ಸಿಡಿಸಿದರು.
ಇನ್ನೊಂದು ಪಂದ್ಯದಲ್ಲಿ ಕೆನಡಾದ ಡೆನಿಶ್ ಶಪೊವಲೊವ್ 6–4, 6–4ರಿಂದ ಸರ್ಬಿಯಾದ ಮಿಯೊಮಿರ್ ಕೆಮಾನೊವಿಚ್ ಎದುರು ಗೆದ್ದರು. ಈ ಹೋರಾಟದಲ್ಲಿ ಡೆನಿಶ್ ಒಟ್ಟು 16 ಏಸ್‌ಗಳನ್ನು ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು.
ಜಪಾನ್‌ನ ಟಾರೊ ಡೇನಿಯಲ್ 6–4, 4–6, 7–6ರಿಂದ ಎರಡನೇ ಶ್ರೇಯಾಂಕದ ಆಟಗಾರ ಬೊರ್ನಾ ಕೊರಿಕ್‌ಗೆ ಆಘಾತ ನೀಡಿದರು.
ಇತರ ಪಂದ್ಯಗಳಲ್ಲಿ ಯಸುಟಾಕ ಉಚಿಯಾಮಾ 6–2, 6–2ರಲ್ಲಿ ಬೆನೊಯಿಟ್ ಪಿಯೆರ್ ಎದುರೂ, ರಿಯೆಲ್ ಒಪೆಲ್ಕಾ 6–3, 6–4ರಲ್ಲಿ ಟೇಲರ್ ಫ್ರಿಟ್ಜ್ ವಿರುದ್ಧವೂ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.