ವಿಂಬಲ್ಡನ್, ಲಂಡನ್: ಕಜಕಸ್ತಾನದ ಎಲೆನಾ ರಿಬಾಕಿನಾ ವಿಂಬಲ್ಡನ್ ಟೆನಿಸ್ ಟೂರ್ನಿಯ ‘ರಾಣಿ’ಯಾಗಿ ಮೆರೆದರು. ಗ್ರ್ಯಾನ್‌ಸ್ಲಾಮ್ ಟ್ರೋಫಿ ಗೆದ್ದ ಆಫ್ರಿಕಾದ ಮೊದಲ ಮಹಿಳೆ ಎನಿಸಿಕೊಳ್ಳುವ ಆನ್ಸ್ ಜಬೇರ್ ಅವರ ಕನಸು ನುಚ್ಚುನೂರಾಯಿತು.
ಆಲ್ ಇಂಗ್ಲೆಂಡ್‌ನ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ರಿಬಾಕಿನಾ 3-6, 6-2, 6-2 ರಲ್ಲಿ ಟ್ಯುನಿಷಿಯಾದ ಜಬೇರ್ ವಿರುದ್ಧ ಗೆದ್ದರು.
ವೇಗದ ಸರ್ವ್ ಮತ್ತು ನಿಖರ ಫೋರ್‌ಹ್ಯಾಂಡ್ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ರಿಬಾಕಿನಾ ಒಂದು ಗಂಟೆ 47 ನಿಮಿಷಗಳಲ್ಲಿ ಜಯಿಸಿದರು. ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಕಜಕಸ್ತಾನದ ಮೊದಲ ಮಹಿಳೆ ಎಂಬ ಗೌರವ ಅವರಿಗೆ ಒಲಿಯಿತು.
ಮಾಸ್ಕೊ ಮೂಲದ ರಿಬಾಕಿನಾ 2018 ರವರೆಗೂ ರಷ್ಯಾವನ್ನು ಪ್ರತಿನಿಧಿಸುತ್ತಿದ್ದರು. ಆ ಬಳಿಕ ಕಜಕಸ್ತಾನ ಪರ ಆಡತೊಡಗಿದ್ದರು. 23 ವರ್ಷದ ರಿಬಾಕಿನಾ ಮೊದಲ ಸೆಟ್ ಸೋತರೂ, ಒತ್ತಡಕ್ಕೆ ಒಳಗಾಗದೆ ಸೊಗಸಾದ ರೀತಿಯಲ್ಲಿ ಮರುಹೋರಾಟ ನಡೆಸಿದರು.
ಮೊದಲ ಸೆಟ್‌ನಲ್ಲಿ ಜಬೇರ್ ಪೂರ್ಣ ಪ್ರಭುತ್ವ ಮೆರೆದರು. ಎರಡು ಬಾರಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದರು. ತಮ್ಮ ಎಲ್ಲ ಸರ್ವ್‌ಗಳಲ್ಲಿ ಪಾಯಿಂಟ್ ಗಳಿಸಿ 1–0 ರಲ್ಲಿ ಮುನ್ನಡೆದರು.
ಎರಡನೇ ಸೆಟ್‌ನಲ್ಲಿ ಲಯ ಕಂಡುಕೊಂಡ ರಿಬಾಕಿನಾ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್ ಬ್ರೇಕ್ ಮಾಡಿದರು. ಹಿನ್ನಡೆ ಅನುಭವಿಸಿದ ಜಬೇರ್ ಒತ್ತಡಕ್ಕೆ ಒಳಗಾದಂತೆ ಕಂಡುಬಂದರು. ಇದರಿಂದ ಮೇಲಿಂದ ಮೇಲೆ ಸ್ವಯಂಕೃತ ತಪ್ಪುಗಳು ಉಂಟಾದವು. ಕಜಕಿಸ್ತಾನದ ಆಟಗಾರ್ತಿ ಸುಲಭದಲ್ಲಿ ಸೆಟ್ ಗೆದ್ದು 2–2 ರಲ್ಲಿ ಸಮಬಲ ಸಾಧಿಸಿದರು.
ನಿರ್ಣಾಯಕ ಸೆಟ್‌ನಲ್ಲೂ ರಿಬಾಕಿನಾ ಉತ್ತಮ ಆಟ ಮುಂದುವರಿಯಿತು. ಜಬೇರ್ ಅವರ ಬ್ಯಾಕ್‌ಹ್ಯಾಂಡ್ ರಿಟರ್ನ್‌ನಲ್ಲಿ ಚೆಂಡು ಅಂಕಣದ ಹೊರ ಬೀಳುತ್ತಿದ್ದಂತೆಯೇ, ಗೆಲುವಿನ ನಗು ಬೀರಿದರು.
₹ 19 ಕೋಟಿ ಬಹುಮಾನ
ವಿಂಬಲ್ಡನ್ ಚಾಂಪಿಯನ್ ರಿಬಾಕಿನಾ ಅವರು ಮಿರುಗುವ ಟ್ರೋಫಿಯ ಜತೆ ₹ 19 ಕೋಟಿ ನಗದು ಬಹುಮಾನ ಗೆದ್ದರು. ‘ರನ್ನರ್ಸ್ ಅಪ್’ ಜಬೇರ್ ₹ 10 ಕೋಟಿ ನಗದು ಬಹುಮಾನ ಗಳಿಸಿದರು. ಕಳೆದ ಬಾರಿಗೆ ಹೋಲಿಸಿದರೆ ಬಹುಮಾನ ಮೊತ್ತ ಶೇ 17 ರಷ್ಟು ಹೆಚ್ಚಳ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.