ವಿಂಬಲ್ಡನ್: ಟೆನಿಸ್‌ನ ದಿಗ್ಗಜ ಆಟಗಾರ ರೋಜರ್ ಫೆಡರರ್ ಅವರು 25 ವರ್ಷಗಳಲ್ಲಿ ಇದೇ ಮೊದಲ ಬಾರಿ ಎಟಿಪಿ ರ‍್ಯಾಂಕಿಂಗ್ ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಸ್ವಿಟ್ಜರ್‌ಲೆಂಡ್‌ನ ಫೆಡರರ್ 1997 ರಲ್ಲಿ ತಮ್ಮ 16ನೇ ವರ್ಷದಲ್ಲಿ ಚೊಚ್ಚಲ ಸಲ ಎಟಿಪಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಂದು ಜಂಟಿ 803ನೇ ಸ್ಥಾನದಲ್ಲಿದ್ದರು. ಅಂದಿನಿಂದ ಇದುವರೆಗೆ ಎಟಿಪಿ ಪ್ರತಿ ವಾರ ಬಿಡುಗಡೆ ಮಾಡುವ ರ‍್ಯಾಂಕಿಂಗ್‌ನಲ್ಲೂ ಅವರ ಹೆಸರು ಕಾಣಿಸಿಕೊಳ್ಳುತ್ತಿತ್ತು. ಕಾಲು ಶತಮಾನದ ಬಳಿಕ ಅವರ ಹೆಸರು ಇಲ್ಲದ ಪಟ್ಟಿ ಹೊರಬಿದ್ದಿದೆ.
ಆಟಗಾರರು ಹಿಂದಿನ 52 ವಾರಗಳಲ್ಲಿ ನೀಡಿದ ಪ್ರದರ್ಶನ ಆಧರಿಸಿ ರ‍್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ಸ್ವಿಸ್ ಆಟಗಾರ ಕಳೆದ ವರ್ಷ ವಿಂಬಲ್ಡನ್ ಬಳಿಕ ಯಾವುದೇ ಟೂರ್ನಿಯಲ್ಲೂ ಪಾಲ್ಗೊಂಡಿಲ್ಲ. ಅವರ ರ‍್ಯಾಂಕಿಂಗ್ ಪಾಯಿಂಟ್ ಶೂನ್ಯಕ್ಕೆ ಇಳಿಕೆಯಾಗಿರುವುದಿಂದ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಏಳನೇ ಸ್ಥಾನಕ್ಕೆ ಕುಸಿದ ನೊವಾಕ್: ಸರ್ಬಿಯದ ನೊವಾಕ್ ಜೊಕೊವಿಚ್ ಅವರು ವಿಂಬಲ್ಡನ್ ಟೂರ್ನಿಯಲ್ಲಿ ಚಾಂಪಿಯನ್ ಆದರೂ, ರ‍್ಯಾಂಕಿಂಗ್‌ನಲ್ಲಿ ನಾಲ್ಕು ಕ್ರಮಾಂಕ ಕುಸಿತ ಕಂಡಿದ್ದು ಏಳನೇ ಸ್ಥಾನ ಪಡೆದಿದ್ದಾರೆ. ವಿಂಬಲ್ಡನ್ ಟೂರ್ನಿಯಲ್ಲಿ ರ‍್ಯಾಂಕಿಂಗ್ ಪಾಯಿಂಟ್ ನೀಡದಿರಲು ಎಟಿಪಿ ನಿರ್ಧರಿಸಿದ್ದು ಇದಕ್ಕೆ ಕಾರಣ.
ರಷ್ಯಾ ಮತ್ತು ಬೆಲಾರಸ್‌ನ ಸ್ಪರ್ಧಿಗಳು ವಿಂಬಲ್ಡನ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಸಂಘಟಕರು ನಿರ್ಬಂಧ ವಿಧಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಎಟಿಪಿಯು ರ‍್ಯಾಂಕಿಂಗ್ ಪಾಯಿಂಟ್ ನೀಡದಿರಲು ತೀರ್ಮಾನಿಸಿತ್ತು.
ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಸ್ಪೇನ್‌ನ ರಫೆಲ್ ನಡಾಲ್, ಗ್ರೀಸ್‌ನ ಸ್ಟೆಫಾನೊಸ್ ಸಿಸಿಪಸ್, ನಾರ್ವೆಯ ಕ್ಯಾಸ್ಪರ್ ರೂಡ್ ಬಳಿಕದ ಸ್ಥಾನಗಳಲ್ಲಿದ್ದಾರೆ. ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಇಗಾ ಸ್ವೆಟೆಕ್ ಅವರ ಅಗ್ರಸ್ಥಾನ ಅಬಾಧಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.