ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಚ್ ಅವರನ್ನು 6-2, 4-6, 6-2, 7-6 ಸೆಟ್‌ಗಳಿಂದ ರಫೆಲ್ ನಡಾಲ್ ಸೋಲಿಸಿದ್ದಾರೆ.
ಮೊದಲ ಸೆಟ್‌ನಲ್ಲಿ ಜೊಕೊವಿಕ್ ವಿರುದ್ಧ ನಡಾಲ್ ಮುನ್ನಡೆ ಸಾಧಿಸಿದರೆ, ಜೊಕೊವಿಕ್ ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದರು. ಆದರೆ, ದಿಟ್ಟ ಆಟವಾಡಿದ ನಡಾಲ್ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದರು.
13 ಬಾರಿಯ ಚಾಂಪಿಯನ್ ಆಗಿರುವ ನಡಾಲ್ ಈ ಗೆಲುವಿನ ಮೂಲಕ ಫ್ರೆಂಚ್ ಓಪನ್ ಟೂರ್ನಿಯಲ್ಲಿ 15ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಜೊಕೊವಿಕ್, ಕಳೆದ ವರ್ಷ ನಡೆದಿದ್ದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಡಾಲ್ ಅವರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು.
‘ಆವೆಮಣ್ಣಿನಲ್ಲಿ ನಾನು ರಾತ್ರಿ ಅವಧಿಯಲ್ಲಿ ಆಡಲು ಇಚ್ಛಿಸುವುದಿಲ್ಲ. ಇದು ಅತ್ಯಂತ ಕಠಿಣ ಸವಾಲಾಗಿದ್ದು ಪಂದ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ನಡಾಲ್ ಪಂದ್ಯಕ್ಕೂ ಮುನ್ನ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.