ADVERTISEMENT

ಫ್ರೆಂಚ್ ಓಪನ್‌ ಟೆನಿಸ್‌: ರೂಡ್‌, ರಿಬಾಕಿನಾ ಮುನ್ನಡೆ

ಮೂರನೇ ಸುತ್ತಿಗೆ ಜೊಕೊವಿಚ್

ಎಎಫ್‌ಪಿ
ರಾಯಿಟರ್ಸ್
Published 1 ಜೂನ್ 2023, 23:43 IST
Last Updated 1 ಜೂನ್ 2023, 23:43 IST
ಎಲೆನಾ ರಿಬಾಕಿನಾ ಅವರ ಫೋರ್‌ಹ್ಯಾಂಡ್‌ ರಿಟರ್ನ್‌ ವೈಖರಿ –ಎಎಫ್‌ಪಿ ಚಿತ್ರ
ಎಲೆನಾ ರಿಬಾಕಿನಾ ಅವರ ಫೋರ್‌ಹ್ಯಾಂಡ್‌ ರಿಟರ್ನ್‌ ವೈಖರಿ –ಎಎಫ್‌ಪಿ ಚಿತ್ರ   

ಪ್ಯಾರಿಸ್‌: ನಾರ್ವೆಯ ಕ್ಯಾಸ್ಪರ್‌ ರೂಡ್‌ ಮತ್ತು ಕಜಕಸ್ತಾನದ ಎಲೆನಾ ರಿಬಾಕಿನಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತು ಪ್ರವೇಶಿಸಿದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ ಅಪ್‌ ರೂಡ್‌ 6-3, 6-2, 4-6, 7-5 ರಿಂದ ಇಟಲಿಯ ಆಟಗಾರ, ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದ ಗ್ಯುಲಿಯೊ ಜೆಪಿಯೆರಿ ಅವರನ್ನು ಮಣಿಸಿದರು.

ಮೊದಲ ಎರಡು ಸೆಟ್‌ಗಳನ್ನು ಗೆದ್ದುಕೊಂಡ ರೂಡ್‌, ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ನಾಲ್ಕನೇ ಸೆಟ್‌ ಗೆದ್ದ ಜೆಪಿಯೆರಿ, ಐದನೇ ಸೆಟ್‌ನಲ್ಲಿ 5–5 ರಲ್ಲಿ ಸಮಬಲ ಸಾಧಿಸಿದರು. ಈ ವೇಳೆ ಎಚ್ಚರಿಕೆಯ ಆಟವಾಡಿದ ರೂಡ್‌ ಬಿರುಸಿನ ಹೊಡೆಗಳ ಮೂಲಕ ಮೇಲುಗೈ ಸಾಧಿಸಿ ಪಂದ್ಯ ಗೆದ್ದರು.

ADVERTISEMENT

ಡೆನ್ಮಾರ್ಕ್‌ನ ಹೋಲ್ಗರ್‌ ರೂನ್‌ ಅವರು ಫ್ರಾನ್ಸ್‌ನ ಗೇಲ್‌ ಮೊಂಫಿಲ್ಸ್‌ ಎದುರು ‘ವಾಕ್‌ ಓವರ್‌’ ಪಡೆದರು. 36 ವರ್ಷದ ಮೊಂಫಿಲ್ಸ್‌ ಅವರು ಮಣಿಕಟ್ಟಿನ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದರು.

ರಿಬಾಕಿನಾಗೆ ಗೆಲುವು: ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ರಿಬಾಕಿನಾ 6–3, 6–3 ರಲ್ಲಿ ಜೆಕ್‌ ರಿಪಬ್ಲಿಕ್‌ನ ಲಿಂಡಾ ನೊಸ್ಕೊವಾ ಎದುರು ಗೆದ್ದರು. ವಿಂಬಲ್ಡನ್‌ ಚಾಂಪಿಯನ್‌ ಆಗಿರುವ ರಿಬಾಕಿನಾ ಮುಂದಿನ ಪಂದ್ಯದಲ್ಲಿ ಸ್ಪೇನ್‌ನ ಸಾರಾ ಸೊರಿಬೆಸ್‌ ಟೊರ್ಮೊ ವಿರುದ್ಧ ಹಣಾಹಣಿ ನಡೆಸುವರು.

ಅಮೆರಿಕದ ಕೈಲಾ ಡೇ 6-2, 4-6, 6-4 ರಲ್ಲಿ ತನ್ನದೇ ದೇಶದ ಅನುಭವಿ ಆಟಗಾರ್ತಿ ಮ್ಯಾಡಿಸನ್‌ ಕೀಸ್‌ ಅವರಿಗೆ ನಿರ್ಗಮನದ ಹಾದಿ ತೋರಿದರು. 74 ಸ್ವಯಂಕೃತ ತಪ್ಪುಗಳನ್ನು ಮಾಡಿದ 20ನೆ ಶ್ರೇಯಾಂಕದ ಆಟಗಾರ್ತಿ ಮ್ಯಾಡಿಸನ್‌, ಪಂದ್ಯವನ್ನು ಎದುರಾಳಿಗೆ ಒಪ್ಪಿಸಿದರು.

ಅಗ್ರಶ್ರೆಯಾಂಕದ ಆಟಗಾರ್ತಿ ಪೋಲೆಂಡ್‌ನ ಇಗಾ ಶ್ವಾಂಟೆಕ್ ಎರಡನೇ ಸುತ್ತಿನಲ್ಲಿ 6–4, 6–0 ಯಿಂದ ಅಮೆರಿಕದ ಕ್ಲೈರ್‌ ಲಿಯು ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಸ್ಲೊವಾಕಿಯದ ಅನಾ ಕರೊಲಿನಾ 6–3, 6–4 ರಿಂದ ಸ್ಪೇನ್‌ನ ಅಲಿಯೊನಾ ಬೊಲ್ಸೊವಾ ವಿರುದ್ಧ; 16 ವರ್ಷದ ಆಟಗಾರ್ತಿ ಮಿರಾ ಆಂಡ್ರೀವಾ 6–3, 6–3 ರಿಂದ ಫ್ರಾನ್ಸ್‌ನ ಡಯಾನ ಪಾರಿ ವಿರುದ್ದ; ಸ್ಪೇನ್‌ನ ಸಾರಾ ಸೊರಿಬೆಸ್ 6–4, 6–1 ರಲ್ಲಿ ಕ್ರೊವೇಷ್ಯಾದ ಪೆಟ್ರಾ ಮಾರ್ಟಿಚ್‌ ವಿರುದ್ಧ ಜಯಿಸಿದರು.

ಜೊಕೊವಿಚ್‌ ಮುನ್ನಡೆ: ವಿಶ್ವದ ಮೂರನೇ ರ್‍ಯಾಂಕ್‌ನ ಆಟಗಾರ ಸರ್ಬಿಯದ ನೊವಾಕ್‌ ಜೊಕೊವಿಚ್‌ ಅವರು ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 7–6, 6–0, 6–3 ರಲ್ಲಿ ಹಂಗರಿಯ ಮಾರ್ಟೊನ್ ಫುಕ್ಸೊವಿಕ್ಸ್‌ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ಮುನ್ನಡೆದರು.

ದಾಖಲೆಯ 23ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್‌ಗೆ ಮೊದಲ ಸೆಟ್‌ನಲ್ಲಿ ಭಾರೀ ಪೈಪೋಟಿ ಎದುರಾಯಿತು. ಆ ಬಳಿಕ ಅದ್ಭುತ ಲಯದಲ್ಲಿ ಆಡಿ ಕೇವಲ ಮೂರು ಗೇಮ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟು ಮುಂದಿನ ಸುತ್ತು ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.