ಪ್ಯಾರಿಸ್: ನಾರ್ವೆಯ ಕಾಸ್ಪರ್ ರೂಡ್ ಅವರ ಸವಾಲನ್ನು ದಿಟ್ಟವಾಗಿ ಎದುರಿಸಿದ ಮೂರನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ನಾಲ್ಕನೇ ಸುತ್ತು ಪ್ರವೇಶಿಸಿದರು. ಕೋರ್ಟ್ ಫಿಲಿಪ್ ಚಾಟ್ರಿಯರ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಅವರು 6–4, 6–3, 6–1ರ ಗೆಲುವು ಸಾಧಿಸಿದರು.
ಈ ಬಾರಿಯ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಗಳಿಸಿರುವ ಆಸ್ಟ್ರಿಯಾದ ಥೀಮ್ ಫ್ರೆಂಚ್ ಓಪನ್‌ನ ಕಳೆದ ಎರಡು ಆವೃತ್ತಿಗಳ ಫೈನಲ್‌ನಲ್ಲಿ ರಫೆಲ್ ನಡಾಲ್ ಎದುರು ಸೋತಿದ್ದರು.
ಶುಕ್ರವಾರ ಮೊದಲ ಸೆಟ್‌ನ ಅರಂಭದಲ್ಲಿ ಥೀಮ್ ಸರ್ವ್‌ಗಳಲ್ಲಿ ನಿಖರತೆ ಕಾಪಾಡಿಕೊಳ್ಳಲು ಪರದಾಡಿದರು. ಆದರೆ ನಿಧಾನಕ್ಕೆ ಲಯ ಕಂಡುಕೊಂಡು ಪಾಯಿಂಟ್‌ಗಳನ್ನು ಕಲೆ ಹಾಕಿದರು. ರೋಮ್ ಮತ್ತು ಹ್ಯಾಂಬರ್ಗ್ ಓಪನ್ ಟೂರ್ನಿಗಳ ಸೆಮಿಫೈನಲ್‌ನಲ್ಲಿ ಆಡಿ ಇಲ್ಲಿಗೆ ಬಂದಿರುವ ರೂಡ್ ಈ ಬಾರಿ ಆವೆಮಣ್ಣಿನಂಕಣದಲ್ಲಿ ಪಾರಮ್ಯ ಮೆರೆದು ಗಮನ ಸೆಳೆದಿದ್ದಾರೆ.
ಗ್ರ್ಲಾನ್‌ಸ್ಲಾಂ ಟೂರ್ನಿಯೊಂದರಲ್ಲಿ ನಾಲ್ಕನೇ ಸುತ್ತು ಪ್ರವೇಶಿಸುವ ನಾರ್ವೆಯ ಎರಡನೇ ಆಟಗಾರ ಎಂಬ ಕನಸು ಹೊತ್ತು ಕಣಕ್ಕೆ ಇಳಿದಿದ್ದರು. 1997ರ ಆಸ್ಟ್ರೇಲಿಯನ ಓಪನ್ ಟೂರ್ನಿಯಲ್ಲಿ ರೂಡ್ ಅವರ ತಂದೆ ಕ್ರಿಸ್ಟಿಯನ್ ಅವರು 16ರ ಘಟ್ಟ ಪ್ರವೇಶಿಸಿದ್ದರು.
21 ವರ್ಷದ ರೂಡ್‌ಗೆ ಇಲ್ಲಿ 28ನೇ ಶ್ರೇಯಾಂಕ ನೀಡಲಾಗಿತ್ತು. ಥೀಮ್ ಮತ್ತು ರೂಡ್ ಇದೇ ಮೊದಲ ಬಾರಿ ಮುಖಾಮುಖಿಯಾಗಿದ್ದರು. ಆರು ಬಾರಿ ಎದುರಾಳಿಯ ಸರ್ವ್ ಮುರಿದ ಥೀಮ್ ಎರಡನೇ ಸೆಟ್‌ನಲ್ಲಿ ಪಂದ್ಯದ ಐದನೇ ಏಸ್ ಸಿಡಿಸುವ ಮೂಲಕ ಗೆಲುವು ಸಾಧಿಸಿದ ಅವರು ಮೂರನೇ ಸೆಟ್‌ನಲ್ಲಿ ಅಮೋಘ ಆಟವಾಡಿ ಪಂದ್ಯ ಗೆದ್ದುಕೊಂಡರು.
ಸಿಮೋನಾ ಹಲೆಪ್‌ಗೆ ಗೆಲುವು
ಮಹಿಳೆಯರ ವಿಭಾಗದಲ್ಲಿ ರೊಮೇನಿಯಾದ ಸಿಮೋನಾ ಹಲೆಪ್ ಅಮೆರಿಕದ ಅಮಾಂಡ ಅನಿಸಿಮೊವ ಅವರನ್ನು 6-0, 6-1ರಲ್ಲಿ ಮಣಿಸಿ ನಾಲ್ಕನೇ ಸುತ್ತು ಪ್ರವೇಶಿಸಿದರು. ಪೋಲೆಂಡ್‌ನ ಐಗಾ ಸ್ವಿವಾಟೆಕ್ ಅವರು ಕೆನಡಾದ ಯೂಜಿನಿ ಬೊಶಾರ್ಡ್ ಎದುರು 6-3, 6-2ರಲ್ಲಿ ಗೆಲುವು ಸಾಧಿಸಿದರು. ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ರಷ್ಯಾದ ಎಕತೇರಿನಾ ಅಲೆಕ್ಸಾಂಡ್ರೋವಾ ಅವರನ್ನು 6-4, 7-5ರಲ್ಲಿ ಮಣಿಸಿದರು. ಅರ್ಜೆಂಟೀನಾದ ನಾದಿಯಾ ಪೊಡೊರೊಸ್ಕಾ 6-3, 6-2ರಲ್ಲಿ ಸ್ಲೊವಾಕಿಯಾದ ಅನಾ ಕರೋಲಿನಾ ಸಚ್‌ಮೆಡ್ಲೋವ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.