ADVERTISEMENT

ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿ ಇಂದಿನಿಂದ: ಭಾವನಾತ್ಮಕ ವಿದಾಯಕ್ಕೆ ಸಜ್ಜಾದ ನಡಾಲ್

ಏಜೆನ್ಸೀಸ್
Published 25 ಮೇ 2024, 23:30 IST
Last Updated 25 ಮೇ 2024, 23:30 IST
<div class="paragraphs"><p>ರಫೇಲ್ ನಡಾಲ್</p></div>

ರಫೇಲ್ ನಡಾಲ್

   

ಪ್ಯಾರಿಸ್‌ : ಸ್ಪೇನ್‌ನ ಮಹಾನ್‌ ಆಟಗಾರ ರಫೇಲ್ ನಡಾಲ್ ಅವರು ರೋಲಂಡ್‌ ಗ್ಯಾರೋಸ್‌ನಲ್ಲಿ ಬಹುತೇಕ ಕೊನೆಯ ಬಾರಿ ಆಡಲಿದ್ದಾರೆ. ಭಾನುವಾರ ಆರಂಭವಾಗುವ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಅವರ 14 ಸಿಂಗಲ್ಸ್‌ ಪ್ರಶಸ್ತಿಗಳ ಸಾಲಿಗೆ ಇನ್ನೊಂದು ಸೇರುವ ಸಾಧ್ಯತೆ ಕ್ಷೀಣ. ಆದರೆ ಇಲ್ಲಿ ಅವರ ವರ್ಚಸ್ಸು ಮತ್ತು ದಾಖಲೆಯನ್ನು ಭವಿಷ್ಯದಲ್ಲಿ ಬೇರಾವುದೇ ಆಟಗಾರ ಸರಿಗಟ್ಟುವ ಸಾಧ್ಯತೆ ದೂರ.

22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ನಡಾಲ್‌ 2005ರಲ್ಲಿ ಮೊದಲ ಸಲ ಇಲ್ಲಿ ಗೆದ್ದಾಗ ಅವರಿಗೆ ಹದಿಹರೆಯ. ಇನ್ನು 9 ದಿನಗಳಲ್ಲಿ (ಜೂನ್‌ 3) ಅವರು 38ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ADVERTISEMENT

ವಿಶ್ವದ ಅಗ್ರಮಾನ್ಯ ಆಟಗಾರನಾಗಿದ್ದ ಅವರು ಗಾಯಾಳಾದ ನಂತರ ಈಗ 276ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಬಾರಿಯ ಫ್ರೆಂಚ್‌ ಓಪನ್‌ನಲ್ಲಿ ಅವರು ಶ್ರೇಯಾಂಕರಹಿತ ಆಟಗಾರ.

ಸೋಮವಾರ ಮೊದಲ ಸುತ್ತಿನಲ್ಲಿ ಅವರಿಗೆ ಬಲಿಷ್ಠ ಆಟಗಾರ– ವಿಶ್ವದ ನಾಲ್ಕನೇ ಕ್ರಮಾಂಕದ ಅಲೆಕ್ಸಾಂಡರ್‌ ಜ್ವರೇವ್ (ಜರ್ಮನಿ) ಎದುರಾಗಿದ್ದಾರೆ.

ಇನ್ನೊಬ್ಬ ಘಟಾನುಘಟಿ ಆಟಗಾರ, 24 ಬಾರಿಯ ಗ್ರ್ಯಾಂಡ್‌ಸ್ಲಾಮ್‌ ವಿಜೇತ ನೊವಾಕ್ ಜೊಕೊವಿಚ್‌ ಅವರು ಮೂರು ಬಾರಿ ಫ್ರೆಂಚ್‌ ಓಪನ್ ಗೆದ್ದಿದ್ದಾರೆ. ಆದರೆ 37 ವರ್ಷದ ಸರ್ಬಿಯಾದ ಆಟಗಾರ ಈ ವರ್ಷ ಯಾವುದೇ ಪ್ರಮುಖ ಪ್ರಶಸ್ತಿ ಗೆದ್ದುಕೊಂಡಿಲ್ಲ.

ವಿಶ್ವದ ಎರಡನೇ ನಂಬರ್ ಆಟಗಾರ ಹಾಗೂ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಯಾನಿಕ್ ಸಿನ್ನರ್ ಅವರಿಗೆ ಮೊದಲ ಸುತ್ತಿನ ಎದುರಾಳಿ ಅಮೆರಿಕದ ಕ್ರಿಸ್‌ ಯುಬ್ಯಾಂಕ್ಸ್‌. ಇಲ್ಲಿ ಉತ್ತಮ ಪ್ರದರ್ಶನ ನೀಡಿದಲ್ಲಿ ಸಿನ್ನರ್ ಅವರಿಗೆ ಜೊಕೊವಿಚ್ ಅವರನ್ನು ಹಿಂದಿಕ್ಕಲು ಅವಕಾಶವಿದೆ. ಮೂರನೇ ಕ್ರಮಾಂಕದ ಆಟಗಾರ ಕಾರ್ಲೊಸ್ ಅಲ್ಕರಾಝ್ ಅವರಿಗೆ ಕ್ವಾಲಿಫೈಯರ್, ಅಮೆರಿಕದ ಜೆ.ಜೆ.ವೋಲ್ಫ್ ಎದುರಾಳಿ.

‘ನಿವೃತ್ತಿ ಪಕ್ಕಾ ಎನ್ನಲಾರೆ’: ‘ಈ ಬಾರಿಯದ್ದು ನನ್ನ ಕೊನೆಯ ಫ್ರೆಂಚ್‌ ಓಪನ್ ಎಂದು ನೂರಕ್ಕೆ ನೂರರಷ್ಟು ಖಚಿತವಾಗಿ ಹೇಳಲಾರೆ. ಸದ್ಯ ನಾನು ಆಟವನ್ನು ಆಸ್ವಾದಿಸುತ್ತಿದ್ದೇನೆ’ ಎಂದು ಟೂರ್ನಿಗೆ ಪೂರ್ವಭಾವಿಯಾಗಿ ನಡಾಲ್‌ ಸೂಚ್ಯವಾಗಿ ಹೇಳಿದ್ದಾರೆ.

ಶ್ವಾಂಟೆಕ್ ಫೆವರೀಟ್‌: ಮಹಿಳಾ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಇಗಾ ಶ್ವಾಂಟೆಕ್‌, ತಮ್ಮ ನಾಲ್ಕನೇ ಫ್ರೆಂಚ್‌ ಓಪನ್‌ ಪ್ರಶಸ್ತಿಯ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಅವರ ಹಾದಿಗೆ ಸದ್ಯ ತೊಡಕಾಗಬಲ್ಲ ಆಟಗಾರ್ತಿ ಎಂದರೆ ಬೆಲಾರಸ್‌ನ ‌ಅರಿನಾ ಸಬಲೆಂಕಾ.

ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಸಬಲೆಂಕಾ ಕಳೆದ ಆರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಕಡೇಪಕ್ಷ ಸೆಮಿಫೈನಲ್‌ ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.