ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಶ್ವಾಂಟೆಕ್‌, ಜಾಸ್ಮಿನ್‌ ಫೈನಲ್‌ಗೆ

ಫ್ರೆಂಚ್‌ ಓಪನ್‌: ರೋಹನ್‌–ಎಬ್ಡೆನ್‌ ಜೋಡಿಗೆ ಸೋಲು

ಏಜೆನ್ಸೀಸ್
Published 7 ಜೂನ್ 2024, 0:13 IST
Last Updated 7 ಜೂನ್ 2024, 0:13 IST
<div class="paragraphs"><p>ಇಗಾ ಶ್ವಾಂಟೆಕ್‌</p></div>

ಇಗಾ ಶ್ವಾಂಟೆಕ್‌

   

ಪ್ಯಾರಿಸ್‌: ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್‌ ಅವರು ಗುರುವಾರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ 6-2, 6-4 ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ಕೊಕೊ ಗಾಫ್‌ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಹಾಕಿದರು. ಅಲ್ಲದೆ, ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಗೆಲುವಿನ ಸರಣಿಯನ್ನು 20 ಪಂದ್ಯಗಳಿಗೆ ವಿಸ್ತರಿಸಿದರು.

ಪೋಲೆಂಡ್‌ನ 23 ವರ್ಷ ವಯಸ್ಸಿನ ಶ್ವಾಂಟೆಕ್‌, ಕಳೆದ ಐದು ವರ್ಷಗಳಲ್ಲಿ ಇಲ್ಲಿ ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸಿದರು.

ADVERTISEMENT

ಒಂದೊಮ್ಮೆ ಶ್ವಾಂಟೆಕ್ ಪ್ರಶಸ್ತಿ ಗೆದ್ದಲ್ಲಿ ಬೆಲ್ಜಿಯಂನ ಜಸ್ಟಿನ್ ಹೆನಿನ್ (2007–09) ಅವರ ಸತತ ಮೂರು ಪ್ರಶಸ್ತಿ ಗೆದ್ದ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ.

ಅಮೆರಿಕ ಓಪನ್‌ ಚಾಂಪಿಯನ್‌ ಗಾಫ್‌ ವಿರುದ್ಧ ಶ್ವಾಂಟೆಕ್‌ ಗೆಲುವಿನ ದಾಖಲೆಯನ್ನು 11–1ಕ್ಕೆ ಸುಧಾರಿಸಿಲು ಹೆಚ್ಚಿಸಿದರು. 2022ರ ಆವೃತ್ತಿಯ ಫೈನಲ್ ಮತ್ತು ಕಳೆದ ವರ್ಷ ಕ್ವಾರ್ಟರ್‌ ಫೈನಲ್ ಸೇರಿದಂತೆ ಸತತ ಮೂರು ವರ್ಷ ಕ್ಲೇ ಕೋರ್ಟ್ ಗ್ಲ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಅಮೆರಿಕದ ಆಟಗಾರ್ತಿಯನ್ನು ಶ್ವಾಂಟೆಕ್‌ ಹಿಮ್ಮೆಟ್ಟಿಸಿದರು.

ಶ್ವಾಂಟೆಕ್‌ ಶನಿವಾರ ಫೈನಲ್‌ನಲ್ಲಿ 12ನೇ ಶ್ರೇಯಾಂಕದ ಇಟಲಿಯ ಜಾಸ್ಮಿನ್ ಪಾವ್ಲೋನಿ ಅವರನ್ನು ಎದುರಿಸುವರು. ಜಾಸ್ಮಿನ್ ಮತ್ತೊಂದು ಸೆಮಿಫೈನಲ್‌ನಲ್ಲಿ 6–3, 6–1ರಿಂದ ರಷ್ಯಾದ ಮಿರಾ ಆ್ಯಂಡ್ರೀವಾ ಅವರನ್ನು ಮಣಿಸಿದರು. 

ರೋಹನ್‌–ಎಬ್ಡೆನ್‌ ಜೋಡಿಗೆ ಸೋಲು: ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಜೋಡಿಯಾದ ರೋಹನ್‌ ಬೋಪಣ್ಣ ಮತ್ತು ಮ್ಯಾಥ್ಯು ಎಬ್ಡೆನ್‌ ಪುರುಷರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು.

ಎರಡನೇ ಶ್ರೇಯಾಂಕದ ಭಾರತ– ಆಸ್ಟ್ರೇಲಿಯನ್‌ ಜೋಡಿಯು 5-7, 6-2, 2-6 ಸೆಟ್‌ಗಳಿಂದ 11ನೇ ಶ್ರೇಯಾಂಕದ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ ಅವರಿಗೆ ಮಣಿಯಿತು.

ಆಸ್ಟ್ರೇಲಿಯಾ ಓಪನ್‌ನ ಫೈನಲ್‌ನಲ್ಲಿ ರೋಹನ್‌–ಎಬ್ಡೆನ್‌ ಅವರು ಇದೇ ಇಟಲಿಯ ಜೋಡಿಯನ್ನು ನೇರ ಸೆಟ್‌ಗಳಿಂದ ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಸಿಮೋನ್‌– ಆಂಡ್ರಿಯಾ ಜೋಡಿಯು ಮುಯ್ಯಿ ತೀರಿಸಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.