ಮೆಲ್ಬರ್ನ್: ಚಾಂಪಿಯನ್ ಆಟಗಾರರ ಕೋಚ್ ಎಂದೇ ಹೆಸರು ಗಳಿಸಿದ್ದ ಟೆನಿಸ್ ತರಬೇತುದಾರ ಬಾಬ್ ಬ್ರೆಟ್ (67) ಬುಧವಾರ ನಿಧನರಾದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಪುತ್ರಿಯರಾದ ಕರೋಲಿನಾ ಮತ್ತು ಕ್ಯಾಥರಿನಾ ಇದ್ದಾರೆ. ಗ್ರ್ಯಾನ್‌ಸ್ಲಾಂ ಚಾಂಪಿಯನ್ನರಾದ ಬೋರಿಸ್ ಬೆಕರ್, ಗೊರಾನ್ ಇವಾನಿಸೆವಿಚ್ ಮತ್ತು ಮರಿನ್ ಸಿಲಿಕ್‌ಗೆ ತರಬೇತಿ ನೀಡಿದ ಖ್ಯಾತಿ ಬಾಬ್ ಬ್ರೆಟ್ ಅವರದು.
1987ರ ನವೆಂಬರ್‌ನಿಂದ 1991ರ ಫೆಬ್ರುವರಿ ವರೆಗೆ ಬೆಕರ್ ಅವರಿಗೆ ಬಾಬ್ ತರಬೇತಿ ನೀಡಿದ್ದರು. ಬೆಕರ್ ಗಳಿಸಿದ ಪ್ರಮುಖ ಆರು ಪ್ರಶಸ್ತಿಗಳಲ್ಲಿ ಮೂರು ಈ ಅವಧಿಯಲ್ಲಿ ಒಲಿದಿದ್ದವು. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೆ ಜಿಗಿದದ್ದೂ ಇದೇ ಸಂದರ್ಭದಲ್ಲಿ. ಬ್ರಿಟನ್, ಜಪಾನ್ ಮತ್ತು ಕೆನಡಾಗಳಲ್ಲಿ ರಾಷ್ಟ್ರೀಯ ಟೆನಿಸ್ ಸಂಸ್ಥೆಗಳ ಕೋಚ್ ಆಗಿಯೂ ಕಾರ್ಯನಿರ್ವಹಿಸಿರುವ ಬಾಬ್, ಇಟಲಿಯ ಸ್ಯಾನ್ ರೆಮೊದಲ್ಲಿ ಸ್ವಂತ ಅಕಾಡೆಮಿಯನ್ನೂ ಸ್ಥಾಪಿಸಿದ್ದರು. ಕೋಚ್‌ಗಳಿಗೆ ಎಟಿಪಿ ನೀಡುವ ಜೀವಮಾನ ಸಾಧನೆಯ ಟಿಮ್ ಗುಲಿಕ್ಸನ್ ಪ್ರಶಸ್ತಿಗೆ ನವೆಂಬರ್‌ನಲ್ಲಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.