ನ್ಯೂಯಾರ್ಕ್: ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎನ್ನುವ ಮೂಲಕ ಅಚ್ಚರಿಸಿ ಮೂಡಿಸಿರುವ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಮತ್ತೆ ಕ್ರೀಡೆಗೆ ಹಿಂದಿರುಗುವ ಸೂಚನೆ ನೀಡಿದ್ದಾರೆ.
ಕಳೆದ ತಿಂಗಳು ನಡೆದಿದ್ದ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ನಂತರ ಸೆರೆನಾ ಕ್ರೀಡೆಗೆ ವಿದಾಯ ಘೋಷಣೆ ಮಾಡಿದ್ದರು.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ತಮ್ಮ ಸಂಸ್ಥೆ ‘ಸೆರೆನಾ ವೆಂಚರ್ಸ್’ ಅನ್ನು ಪ್ರಚಾರ ಮಾಡುವ ವೇಳೆ ಮಾತನಾಡಿರುವ ಸೆರೆನಾ, ’ನಾನು ನಿವೃತ್ತಿಯಾಗಿಲ್ಲ’ ಎಂದಿದ್ದಾರೆ.
‘(ಹಿಂತಿರುಗುವ) ಸಾಧ್ಯತೆಗಳು ತುಂಬಾ ಹೆಚ್ಚಿವೆ. ನೀವು ನನ್ನ ಮನೆಗೆ ಬರಬಹುದು. ನನ್ನ ಬಳಿ ಟೆನಿಸ್ ಕೋರ್ಟ್ ಇದೆ’ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಟೆನಿಸ್‌ನಿಂದ ದೂರವಾಗುತ್ತಿರುವುದಾಗಿ 41 ವರ್ಷದ ವಿಲಿಯಮ್ಸ್ ಅವರು ಆಗಸ್ಟ್‌ನಲ್ಲಿ ಹೇಳಿದ್ದರು. ಯುಎಸ್ ಓಪನ್ ಟೂರ್ನಿ ತನ್ನ ವಿದಾಯ ಸರಣಿ ಎಂದು ಅವರು ದೃಢಪಡಿಸದೇ ಇದ್ದರೂ, ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿ ಪಂದ್ಯದ ನಂತರವೂ ಅವರಿಗೆ ಗೌರವ ಸಮರ್ಪಿಸಲಾಗುತ್ತಿತ್ತು. ಮೂರನೇ ಸುತ್ತಿನಲ್ಲಿ ಸೋತ ನಂತರ ಅವರಿಗೆ ಭಾವನಾತ್ಮಕ ವಿದಾಯವನ್ನು ನೀಡಲಾಗಿತ್ತು.
ಯುಎಸ್ ಓಪನ್ ನಂತರ ಟೂರ್ನಿಗೆ ತಯಾರಿ ನಡೆಸದಿರುವುದು ನನಗೆ ಸ್ವಾಭಾವಿಕವೆಂದು ಅನಿಸುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
‘ನಾನು ಇನ್ನೂ (ನಿವೃತ್ತಿ ಬಗ್ಗೆ) ನಿಜವಾಗಿಯೂ ಯೋಚಿಸಿಲ್ಲ’ ಎಂದಿದ್ದಾರೆ.
‘ಒಂದು ದಿನ ಕೋರ್ಟ್‌ಗೆ ಹೋಗಿದ್ದೆ. ನಾನು ಸ್ಪರ್ಧೆಯಲ್ಲಿ ಆಡುತ್ತಿಲ್ಲ ಎಂದು ನನ್ನ ಜೀವನದಲ್ಲಿ ಮೊದಲ ಬಾರಿಗೆ ಅನಿಸಿತು. ಅದು ನಿಜಕ್ಕೂ ವಿಚಿತ್ರವೆನಿಸಿತು’ ಎಂದು ಅವರು ತಿಳಿಸಿದ್ದಾರೆ.
‘ಇದು ನನ್ನ ಉಳಿದ ಜೀವನದ ಆರಂಭಿಕ ದಿನದಂತೆ ಭಾಸವಾಗುತ್ತಿದೆ. ನಾನು ಅದನ್ನು ಆನಂದಿಸುತ್ತಿದ್ದೇನೆ. ಆದರೆ ನಾನು ಈಗಲೂ ಆ ದಿನಗಳಂಥ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಸೆರೆನಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.