ವಿಂಬಲ್ಡನ್: ಹುಲ್ಲಿನಂಕಣದಲ್ಲಿ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಯತ್ನದಲ್ಲಿರುವ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್, ಸೋಮವಾರ ಆರಂಭವಾದ ವಿಂಬಲ್ಡನ್ ಟೂರ್ನಿಯ ಮೊದಲ ಸುತ್ತಿನಲ್ಲಿ 6–1, 6–3 ರಿಂದ ಚೀನಾ ಝು ಲಿನ್ ಅವರನ್ನು ಸೋಲಿಸಿ ಶುಭಾರಂಭ ಮಾಡಿದರು.
ಕಳೆದ ತಿಂಗಳು ಮೂರನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡ 22 ವರ್ಷದ ಪೋಲೆಂಡ್‌ನ ಆಟಗಾರ್ತಿ, ವಿಂಬಲ್ಡನ್‌ನಲ್ಲಿ ಇಲ್ಲಿಯವರೆಗೆ ನಾಲ್ಕನೇ ಸುತ್ತನ್ನು ದಾಟಿಲ್ಲ. ಆದರೆ ಮೊದಲ ಸುತ್ತಿನಲ್ಲಿ ವಿಶ್ವ ಕ್ರಮಾಂಕದಲ್ಲಿ 34ನೇ ಸ್ಥಾನದಲ್ಲಿರುವ ಝು ವಿರುದ್ಧ ಗೆಲ್ಲಲು ಪ್ರಯಾಸಪಡಲಿಲ್ಲ.
ಅಮೆರಿಕದ ಆಟಗಾರ್ತಿಯರಿದ್ದ ಮೊದಲ ಸುತ್ತಿನ ಇನ್ನೊಂದು ಸೆಣಸಾಟದಲ್ಲಿ ನಾಲ್ಕನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ 6–2, 6–7 (8–10), 6–3 ರಿಂದ ಲಾರೆನ್ ಡೇವಿಸ್ ವಿರುದ್ಧ ಜಯಗಳಿಸಿದರು.
ಪುರುಷರ ವಿಭಾಗದಲ್ಲಿ ಏಳನೇ ಶ್ರೇಯಾಂಕದ ಪಡೆದಿರುವ, ಆಂಡ್ರೆ ರುಬ್ಲೇವ್ ಮೂರನೇ ಕೋರ್ಟ್‌ನಲ್ಲಿ 6–3, 7–5, 6–4 ರಿಂದ ಮ್ಯಾಕ್ಸ್ ಪರ್ಸೆಲ್ (ಆಸ್ಟ್ರೇಲಿಯಾ) ವಿರುದ್ಧ ಜಯಗಳಿಸಿ ಎರಡನೇ ಸುತ್ತಿಗೆ ಮುನ್ನಡೆದರು. ವಿಂಬಲ್ಡನ್‌ಗೆ ಮರಳಿದ ನಂತರ ಗೆದ್ದ ರಷ್ಯಾದ ಮೊದಲ ಆಟಗಾರ ಎನಿಸಿದರು.
14ನೇ ಶ್ರೇಯಾಂಕದ ಲೊರೆಂಜೊ ಮುಸೆಟ್ಟಿ (ಇಟಲಿ) 6–3 6–1, 7–5 ರಿಂದ ಪೆರುವಿನ ಜುವಾನ್ ಪಾಬ್ಲೊ ವೆರಿಲ್ಲಾಸ್ ಅವರನ್ನು ಸೋಲಿಸಿದರು.
ಮಹಿಳೆಯರ ವಿಭಾಗದಲ್ಲಿ ವಿಶ್ವದ ಮಾಜಿ ನಂಬರ್ ವನ್ ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾ (ಬೆಲಾರಸ್) 6–4, 5–7, 6–4 ರಿಂದ ಚೀನಾದ ಯುವಾನ್ ಯೆ ಮೇಲೆ ಜಯಗಳಿಸಿದರೆ, ರಷ್ಯಾದ ಆಟಗಾರ್ತಿ ವೆರೋನಿಕಾ ಕುದೆರ್‌ಮೆಟೆವಾ, ಎಸ್ಟೊನಿಯಾದ ಕೆಯಿಯಾ ಕನೆಪಿ ಮೇಲೆ ಜಯಗಳಿಸಿದರು. ಅಜರೆಂಕಾ 19ನೇ ಶ್ರೇಯಾಂಕ ಪಡೆದಿದ್ದರೆ, ವೆರೋನಿಕಾ 12ನೇ ಶ್ರೇಯಾಂಕ ಗಳಿಸಿದ್ದಾರೆ.
ಫೆಡರರ್‌ಗೆ ಇಂದು ಗೌರವ
ವಿಂಬಲ್ಡನ್ (ಎಪಿ): ರೋಜರ್ ಫೆಡರರ್ ಮಂಗಳವಾರ ವಿಂಬಲ್ಡನ್ ಸೆಂಟರ್ ಕೋರ್ಟ್‌ಗೆ ಮರಳಲಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ; ಇಲ್ಲಿನ ಹುಲ್ಲಿನಂಕಣದಲ್ಲಿ ದಾಖಲೆ ಸಾಧನೆಗಾಗಿ ಗೌರವ ಸ್ವೀಕರಿಸಲು.
ಕಳೆದ ವರ್ಷ ನಿವೃತ್ತಿ ಪ್ರಕಟಿಸಿದ್ದ ಸ್ವಿಜರ್ಲೆಂಡ್‌ನ ಈ ಆಟಗಾರ ವೃತ್ತಿ ಜೀವನದಲ್ಲಿ ಜಯಿಸಿರುವ 20 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳಲ್ಲಿ ಎಂಟನ್ನು ಅಲ್ ಇಂಗ್ಲೆಂಡ್ ಕ್ಲಬ್‌ನಲ್ಲೇ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಸಿಂಗಲ್ಸ್ ಪ್ರಶಸ್ತಿ ಗೆದ್ದ ದಾಖಲೆ ಸದ್ಯ ಅವರ ಹೆಸರಿನಲ್ಲಿದೆ.
ಸರ್ಬಿಯಾದ ನೊವಾಕ್ ಜೋಕೊವಿಚ್ ಈ ಬಾರಿ ಫೆಡರರ್ ಸಾಧನೆ ಸರಿಗಟ್ಟಲು ಯತ್ನಿಸಲಿದ್ದಾರೆ.
ಒಟ್ಟಾರೆ ಅತಿ ಹೆಚ್ಚಿನ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ದಾಖಲೆ ಅಮೆರಿಕದ ಮಾರ್ಟಿನಾ ನವ್ರಟಿಲೋವಾ ಅವರ ಹೆಸರಿನಲ್ಲಿದೆ. ಅವರು ಇಲ್ಲಿ ಸಿಂಗಲ್ಸ್ ಗೆಲುವಿಗಾಗಿ ನೀಡುವ ತಳಿಗೆಯನ್ನು 9 ಬಾರಿ ಎತ್ತಿ ಹಿಡಿದಿದ್ದಾರೆ.
‘ಮಂಗಳವಾರ ರೋಜರ್ ಫೆಡರರ್ ನಮ್ಮ ಜೊತೆಯಿರಲಿದ್ದಾರೆ. ಸೆಂಟರ್‌ಕೋರ್ಟ್‌ನಲ್ಲಿ ವಿಶೇಷ ಅತಿಥಿಯಾಗಿರಲಿದ್ದಾರೆ. ಅತಿ ಹೆಚ್ಚು ಬಾರಿ ಸಿಂಗಲ್ಸ್ ಪ್ರಶಸ್ತಿ ಗೆಲುವಿಗಾಗಿ ಸನ್ಮಾನ ಸ್ವೀಕರಿಸಲಿದ್ದಾರೆ’ ಎಂದು ಅಲ್ ಇಂಗ್ಲೆಂಡ್ ಕ್ಲಬ್ ಚೇರ್ಮನ್ ಸ್ಯಾಲಿ ಬೋಲ್ಡನ್ ಸೋಮವಾರ ತಿಳಿಸಿದರು.
23 ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಸೆರೆನಾ ವಿಲಿಯಮ್ಸ್ ಅವರನ್ನೂ ಆಹ್ವಾನಿಸಲಾಗಿತ್ತು. ಗರ್ಭಿಣಿಯಾಗಿರುವ ಕಾರಣ ಅವರು ಬರುವ ಸ್ಥಿತಿಯಲ್ಲಿಲ್ಲ ಎಂದರು. ವಿಲಿಯಮ್ಸ್ ಕೂಡ ಕಳೆದ ವರ್ಷ ಟೆನಿಸ್‌ನಿಂದ ನಿವೃತ್ತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.