ಪ್ಯಾರಿಸ್: ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್, ಶನಿವಾರ ನಡೆದ ಫೈನಲ್‌ನಲ್ಲಿ 6–2, 6–1 ರಿಂದ ಇಟಲಿಯ ಜಾಸ್ಮಿನ್ ಪಾವ್ಲೀನಿ ಅವರನ್ನು ಸುಲಭವಾಗಿ ಸೋಲಿಸಿ ಸತತ ಮೂರನೇ ವರ್ಷ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಕಿರೀಟ ಧರಿಸಿದರು.
ರೋಲೆಂಡ್ ಗ್ಯಾರೋಸ್‌ನಲ್ಲಿ ಇದು ಪೋಲೆಂಡ್‌ನ 23 ವರ್ಷ ವಯಸ್ಸಿನ ಆಟಗಾರ್ತಿಗೆ ಐದು ವರ್ಷಗಳಲ್ಲಿ ನಾಲ್ಕನೇ ಪ್ರಶಸ್ತಿ ಕೂಡ. ಫಿಲಿಪ್ ಶಾಟಿಯೆ ಕೋರ್ಟ್‌ನಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಶ್ವಾಂಟೆಕ್ ಆರಂಭದಲ್ಲಿ 1–2 ಹಿನ್ನಡೆಯಲ್ಲಿದ್ದರು. ಆದರೆ ನಂತರ ಸತತವಾಗಿ ಹತ್ತು ಗೇಮ್‌ಗಳನ್ನು ಗೆದ್ದು ಪೂರ್ಣ ಮೇಲುಗೈ ಸಾಧಿಸಿದರು. ಮೊದಲ ಸೆಟ್ ಗೆದ್ದು ಎರಡನೇ ಸೆಟ್‌ನಲ್ಲಿ 5–0 ಮುನ್ನಡೆ ಪಡೆದು ಬೀಗಿದರು. ರೋಲಂಡ್ ಗ್ಯಾರೋಸ್‌ನಲ್ಲಿ ಅವರು ಸತತ 21 ಪಂದ್ಯಗಳನ್ನು ಗೆದ್ದಂತಾಗಿದೆ. ಈ ಕೆಂಪು ಮಣ್ಣಿನ ಅಂಕಣದಲ್ಲಿ ಅವರ ಗೆಲುವಿನ ದಾಖಲೆ 35–2.
ಬೆಲ್ಜಿಯಮ್‌ನ ಜಸ್ಟಿನ್ ಹೆನಿಸ್ 2005 ರಿಂದ 07ರವರೆಗೆ ಸತತ ಮೂರು ವರ್ಷ ಚಾಂಪಿಯನ್ ಆದ ನಂತರ ಆ ಸಾಧನೆ ಸರಿಗಟ್ಟಿದ ಮೊದಲ ಆಟಗಾರ್ತಿ ಎಂಬ ಶ್ರೇಯವೂ ಅವರದಾಯಿತು. ಅವರು 2020ರಲ್ಲೂ ಈ ಪ್ರಶಸ್ತಿ ಗೆದ್ದಿದ್ದರು. ಜೊತೆಗೆ 2022ರಲ್ಲಿ ಅಮೆರಿಕ ಓಪನ್‌ನಲ್ಲೂ ಚಾಂಪಿಯನ್ ಆಗಿದ್ದರು.
12ನೇ ಶ್ರೇಯಾಂಕದ ಪಾವ್ಲೀನಿ ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿತ್ತು. 28 ವರ್ಷದ ಈ ಆಟಗಾರ್ತಿ ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದೇ ಗ್ರ್ಯಾನ್‌ಸ್ಲಾಮ್‌ನಲ್ಲಿ ಈ ಹಿಂದಿನ ಶ್ರೇಷ್ಠ ಸಾಧನೆ. ಅದಕ್ಕಿಂತ ಮೊದಲು ಯಾವುದೇ ಪ್ರಮುಖ ಟೂರ್ನಿಗಳ ಎರಡನೇ ಸುತ್ತನ್ನು ದಾಟಿರಲಿಲ್ಲ.
ಪಾವ್ಲೀನಿ ಅವರು ಭಾನುವಾರ ಮಹಿಳಾ ಡಬಲ್ಸ್ ಫೈನಲ್‌ನಲ್ಲಿ ಸಾರಾ ಇರ್ರಾನಿ ಜೊತೆಗೂಡಿ ಐದನೇ ಶ್ರೇಯಾಂಕದ ಕೋಕೊ ಗಾಫ್– ಕ್ಯಾಥರಿನಾ ಸಿನಿಕೋವಾ ಜೋಡಿಯನ್ನು ಎದುರಿಸಲಿದ್ದಾರೆ. ಡಬಲ್ಸ್‌ನಲ್ಲಿ ಪಾವ್ಲೀನಿ–ಸಾರಾ ಜೋಡಿ 11ನೇ ಶ್ರೇಯಾಂಕ ಗಳಿಸಿದೆ.
ಶ್ವಾಂಟೆಕ್ ಈ ಟೂರ್ನಿಯ ಎರಡನೇ ಸುತ್ತಿನಲ್ಲಿ ಜಪಾನ್‌ನ ನವೊಮಿ ಒಸಾಕಾ ಎದುರು ಸೋಲಿನ ಅಂಚಿನಿಂದ ಚೇತರಿಸಿ ಜಯಗಳಿಸಿದ್ದರು. ಅದನ್ನು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳನ್ನು ಅವರು ನಿರಾಯಾಸವಾಗಿ ಜಯಿಸಿದ್ದಾರೆ. ಆ ಹಾದಿಯಲ್ಲಿ 17 ಗೇಮ್‌ಗಳನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ.
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.