ನವದೆಹಲಿ: ನಿಮ್ಮ ಶ್ರೇಷ್ಠ ಆಟದಲ್ಲಿ ಭಾರತದ ಕ್ರೀಡಾ ಪರಾಕ್ರಮವನ್ನು ಜಗತ್ತು ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಅದ್ಭುತ ವೃತ್ತಿಜೀವನವನ್ನು ಅಭಿನಂದಿಸಿದ್ದಾರೆ. ನಿಮ್ಮ ಸಾಧನೆ ಪ್ರೇರಣೆಯಿಂದ ‘ಹೆಚ್ಚಿನ ಮಹಿಳೆಯರು ಟೆನಿಸ್ ಅನ್ನು ಆಯ್ಕೆ ಮಾಡಿಕೊಂಡು ಮತ್ತು ಅದರಲ್ಲಿ ಉತ್ತಮ ಸಾಧನೆ ಮಾಡಬಹುದು’ ಎಂದು ಅವರು ಹೊಗಳಿದ್ದಾರೆ.
ಕಳೆದ ತಿಂಗಳು ದುಬೈನಲ್ಲಿ ನಡೆದ ಟೆನಿಸ್ ಪಂದ್ಯಾವಳಿಯನ್ನು ಆಡಿದ ಬಳಿಕ ಸಾನಿಯಾ ಕ್ರೀಡಾ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಸಾನಿಯಾ ತಮ್ಮ ವೃತ್ತಿಜೀವನದಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸಾನಿಯಾ ಭಾರತೀಯ ಕ್ರೀಡೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮುಂಬರುವ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅಭಿನಂದನಾ ಸಂದೇಶದಲ್ಲಿ ಪ್ರಧಾನಮಂತ್ರಿ ತಿಳಿಸಿದ್ದಾರೆ.
ಮಾರ್ಚ್ 9ರಂದು ಮೋದಿ ತಮಗೆ ಬರೆದಿರುವ ಪತ್ರವನ್ನು ಸಾನಿಯಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೀವು ಇನ್ನು ಮುಂದೆ ಟೆನಿಸ್ ಆಟ ಆಡದೆ ಇರುವುದು ಟೆನಿಸ್ ಪ್ರೇಮಿಗಳಿಗೆ ನಿಜಕ್ಕೂ ಬೇಸರವಾಗಿದೆ ಎಂದು ಮೋದಿ ಹೇಳಿದ್ದಾರೆ.
‘ನಿಮ್ಮ ಶ್ರೇಷ್ಠತೆ ಆಟದಲ್ಲಿ ಭಾರತದ ಕ್ರೀಡಾ ಪರಾಕ್ರಮವನ್ನು ಜಗತ್ತು ನೋಡಿದೆ. ನೀವು ಆಡಲು ಆರಂಭಿಸಿದಾಗ, ಭಾರತದ ಟೆನಿಸ್ ಕ್ಷೇತ್ರ ತುಂಬಾ ವಿಭಿನ್ನವಾಗಿತ್ತು. ನೀವು ಮಾಡಿರುವ ಸಾಧನೆಯೂ ‘ಹೆಚ್ಚಿನ ಮಹಿಳೆಯರು ಟೆನ್ನಿಸ್ ಅನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡಬಹುದು ಎಂಬುದನ್ನು ವಿವರಿಸುತ್ತದೆ’ ಎಂದಿದ್ದಾರೆ.
‘ನಿಮ್ಮ ಯಶಸ್ಸು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಹಲವಾರು ಮಹಿಳೆಯರಿಗೆ ಶಕ್ತಿಯನ್ನು ನೀಡುತ್ತದೆ. ಕ್ರೀಡಾ ವೃತ್ತಿ ಬಗ್ಗೆ ಹಿಂಜರಿಕೆ ಹೊಂದಿರುವವರಿಗೆ ಶಕ್ತಿ ತುಂಬುತ್ತದೆ’ ಎಂದು ಪ್ರಧಾನಿ ಬರೆದಿದ್ದಾರೆ.
ಮೋದಿ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಾನಿಯಾ, ನಾನು ಯಾವಾಗಲೂ ನಮ್ಮ ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತೇನೆ ಮತ್ತು ಭಾರತ ಹೆಮ್ಮೆ ಪಡುವ ಹಾಗೆ ನನ್ನಿಂದ ಸಾಧ್ಯವಾಗುವ ಎಲ್ಲಾ ಕೆಲಸಗಳನ್ನು ಮುಂದುವರಿಸುತ್ತೇನೆ. ನಿಮ್ಮ ಬೆಂಬಲ ಮತ್ತು ಸ್ಫೂರ್ತಿದಾಯಕ ಮಾತುಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಸಾನಿಯಾ ಯುವ ಕ್ರೀಡಾ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕೆಂದು ಮೋದಿ ಆಶಿಸಿದ್ದಾರೆ.
ಸಾನಿಯಾ ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್‌ನ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.