ADVERTISEMENT

ಪಾಕಿಸ್ತಾನ ಪ್ರವಾಸ: ಡೇವಿಸ್ ಕಪ್ ತಂಡದಲ್ಲಿ ಪೇಸ್‌

ರೋಹನ್‌ ಬೋಪಣ್ಣ, ಜೀವನ್‌, ಸಾಕೇತ್‌ಗೂ ಸ್ಥಾನ

ಪಿಟಿಐ
Published 14 ನವೆಂಬರ್ 2019, 19:34 IST
Last Updated 14 ನವೆಂಬರ್ 2019, 19:34 IST
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ   

ನವದೆಹಲಿ: ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಒ‍ಪ್ಪಿಗೆ ಸೂಚಿಸಿದ್ದ ಆಟಗಾರರೂ ಒಳಗೊಂಡ 8 ಮಂದಿಯ ತಂಡವನ್ನು ಪಾಕಿಸ್ತಾನ ಎದುರಿನ ಡೇವಿಸ್ ಕಪ್ ಟೆನಿಸ್ ಹಣಾಹಣಿಗೆ ಗುರುವಾರ ಪ್ರಕಟಿಸಲಾಗಿದೆ. ಹಿರಿಯ ಆಟಗಾರ ಲಿಯಾಂಡರ್ ಪೇಸ್ ಒಂದು ವರ್ಷದ ನಂತರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತಂಡವನ್ನು ಪ್ರಕಟಿಸಿತು. ಕರ್ನಾಟಕದ ರೋಹನ್ ಬೋಪಣ್ಣ, ಯುವ ಆಟಗಾರ ಸುಮಿತ್ ನಗಾಲ್, ಅನುಭವಿ ರಾಮಕುಮಾರ್‌ ರಾಮನಾಥನ್, ಶಶಿ ಕುಮಾರ್ ಮುಕುಂದ್, ಜೀವನ್ ನೆಡುಂಚೆಳಿಯನ್, ಸಾಕೇತ್ ಮೈನೇನಿ, ಸಿದ್ಧಾರ್ಥ್ ರಾವತ್‌ ಅವರೂ ತಂಡದಲ್ಲಿದ್ದಾರೆ.

ಎಐಟಿಎ ಸಾಮಾನ್ಯವಾಗಿ ಇಬ್ಬರು ಕಾಯ್ದಿರಿಸಿದ ಆಟಗಾರರು ಒಳಗೊಂಡಂತೆ 5 ಮಂದಿಯ ತಂಡವನ್ನು ಪ್ರಕಟಿಸುತ್ತದೆ. ಇದೇ ಮೊದಲ ಬಾರಿ 8 ಮಂದಿಯ ಹೆಸರನ್ನು ಘೋಷಿಸಿದೆ. ಇದೇ ತಿಂಗಳ 29 ಮತ್ತು 30ರಂದು ನಡೆಯಲಿರುವ ಹಣಾಹಣಿಯನ್ನು ಇಸ್ಲಾಮಾಬಾದ್‌ನಿಂದ ಬೇರೆಡೆಗೆ ಸ್ಥಳಾಂತರಿಸಲು ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಪ್ರಯತ್ನ ನಡೆಸುತ್ತಿದ್ದು ಪಾಕ್ ಜೊತೆ ಸತತ ಮಾತುಕತೆಯಲ್ಲಿ ತೊಡಗಿದೆ. ಈ ನಡುವೆ ಭಾರತವು ತಂಡವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ.

ADVERTISEMENT

ನಗಾಲ್ ಮೇಲೆ ಭರವಸೆ:ಅನುಭವಿ ಪ್ರಜ್ಞೇಶ್‌ ಗುಣೇಶ್ವರನ್ ಅನುಪಸ್ಥಿತಿಯಲ್ಲಿ ಸುಮಿತ್ ನಗಾಲ್ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಭಾರತದ ಸಿಂಗಲ್ಸ್ ವಿಭಾಗದ ಸವಾಲನ್ನು ಮುನ್ನಡೆಸುವರು. ಇವರು ಕ್ರಮವಾಗಿ 127 ಮತ್ತು 190ನೇ ರ‍್ಯಾಂಕ್ ಹೊಂದಿದ್ದಾರೆ. ಮುಕುಂದ್ ಮತ್ತು ಮೈನೇನಿ ಈ ವಿಭಾಗದ ಕಾಯ್ದಿರಿಸಿದ ಆಟಗಾರರಾಗಿರುವರು.

ಡಬಲ್ಸ್ ವಿಭಾಗದಲ್ಲಿ ಮೂವರಿಗೆ ಅವಕಾಶ ನೀಡಿರುವುದು ಕೂಡ ಇದೇ ಮೊದಲು. ರೋಹನ್‌ ಬೋಪಣ್ಣ, ಲಿಯಾಂಡರ್ ಪೇಸ್ ಮತ್ತು ಜೀವನ್ ನೆಡುಂಚೆಳಿಯನ್ ಡಬಲ್ಸ್‌ಗೆ ಆಯ್ಕೆಯಾಗಿರುವ ಆಟಗಾರರು. ಎಡಗೈ ಆಟಗಾರ ನೆಡುಂಚೆಳಿಯನ್ ಅನೇಕ ಕಾಲದಿಂದ ಅವಕಾಶಕ್ಕಾಗಿ ಕಾಯುತ್ತಿದ್ದರು. ಈಚೆಗೆ ತೋರುತ್ತಿರುವ ಸ್ಥಿರ ಸಾಮರ್ಥ್ಯವು ಅವರಿಗೆ ಅವಕಾಶ ಒದಗಿಸಿದೆ. ರೋಹಿತ್ ರಾಜ್‌ಪಾಲ್, ತಂಡದ ಆಟವಾಡದ ನಾಯಕ ಆಗಿದ್ದಾರೆ.

ತಂಡ: ಸುಮಿತ್ ನಗಾಲ್, ರಾಮ್‌ಕುಮಾರ್ ರಾಮನಾಥನ್‌, ಶಶಿಕುಮಾರ್‌ ಮುಕುಂದ್‌, ಸಾಕೇತ್ ಮೈನೇನಿ, ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್‌, ಜೀವನ್‌ ನೆಡುಂಚೆಳಿಯನ್, ಸಿದ್ಧಾರ್ಥ್ ರಾವತ್. ನಾಯಕ: ರೋಹಿತ್ ರಾಜ್‌ಪಾಲ್, ಕೋಚ್‌: ಜೀಶನ್ ಅಲಿ, ಫಿಸಿಯೊ: ಆನಂದ ಕುಮಾರ್‌, ಮ್ಯಾನೇಜರ್: ಸುಂದರ್ ಅಯ್ಯರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.