ADVERTISEMENT

ರಾಮಕುಮಾರ್, ಶ್ರೀರಾಮ್‌ಗೆ ಗೆಲುವು ಪಾಕ್ ವಿರುದ್ಧ ಡೇವಿಸ್ ಕಪ್ ಭಾರತಕ್ಕೆ ಮುನ್ನಡೆ

ಪಿಟಿಐ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
<div class="paragraphs"><p>ರಾಮಕುಮಾರ್ ರಾಮನಾಥನ್</p></div>

ರಾಮಕುಮಾರ್ ರಾಮನಾಥನ್

   

ಇಸ್ಲಾಮಾಬಾದ್: ರಾಮಕುಮಾರ್ ರಾಮನಾಥನ್ ಮತ್ತು ಶ್ರೀರಾಮ್ ಬಾಲಾಜಿ ಅವರು ಪಾಕಿಸ್ತಾನದ ಎದುರಾಳಿಗಳ ವಿರುದ್ಧ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ವಿಭಿನ್ನ ಶೈಲಿಯಲ್ಲಿ ಗೆಲ್ಲುವುದರೊಂದಿಗೆ ಭಾರತ ತಂಡ, ಕುತೂಹಲ ಕೆರಳಿಸಿದ ಡೇವಿಸ್‌ ಕಪ್ ವಿಶ್ವ ಗುಂಪಿನ (1) ಪ್ಲೇ ಆಫ್‌ ಪಂದ್ಯದಲ್ಲಿ ಮೊದಲ ದಿನವಾದ ಶನಿವಾರ 2–0 ಮುನ್ನಡೆ ಸಾಧಿಸಿತು.

ರಾಮಕುಮಾರ್ ವಿರುದ್ಧ ಮೊದಲ ಸಿಂಗಲ್ಸ್‌ನಲ್ಲಿ ಅನುಭವಿ ಐಸಾಮ್ ಉಲ್ ಹಕ್ ಖುರೇಷಿ ಪ್ರಬಲ ಹೋರಾಟವನ್ನೇ ನೀಡಿದರು.

ADVERTISEMENT

ಆದರೆ ಪಂದ್ಯದ ತೀವ್ರತೆ, ಥರಗುಟ್ಟುವ ಚಳಿ ಮತ್ತು ಮೂರನೇ ಸೆಟ್‌ನಲ್ಲಿ ಮಂಡಿ ರಜ್ಜು (ಹ್ಯಾಮ್‌ಸ್ಟ್ರಿಂಗ್‌) ನೋವಿನಿಂದ ಬಳಲಿದ ಕಾರಣ ಹೋರಾಟ ಎರಡನೇ ಸೆಟ್‌ವರೆಗೆ ಉಳಿಯಿತು. ಪಂದ್ಯದುದ್ದಕ್ಕೂ ಉತ್ತಮ ಸರ್ವ್ ಮತ್ತು ಎರಡನೇ ಸೆಟ್‌ನಲ್ಲಿ ಉತ್ತಮ ರಿಟರ್ನ್‌ಗಳನ್ನು ಮಾಡಿದ ರಾಮಕುಮಾರ್ 6–7 (3), 7–6 (4), 6–0 ಯಿಂದ 43 ವರ್ಷದ ಐಸಾಮ್ ಸವಾಲನ್ನು ಬದಿಗೊತ್ತಿದರು.

ಪಂದ್ಯದಲ್ಲಿ ಐಸಾಮ್‌ 10 ಡಬಲ್‌ ಫಾಲ್ಟ್‌ಗಳನ್ಜು ಎಸಗಿದರು. ಇನ್ನೊಂದೆಡೆ ರಾಮನಾಥನ್ ಒಂಬತ್ತು ಗೇಮ್‌ಗಳಲ್ಲಿ ಎದುರಾಳಿಗೆ ಒಂದೂ ಪಾಯಿಂಟ್‌ ಕೊಡದೇ ಹಿಡಿತ ಪಡೆದರು.

ಮೊದಲ ಸೆಟ್‌ ಹಿನ್ನಡೆ ಅನುಭವಿಸಿದ್ದ ರಾಮನಾಥನ್, ಎರಡನೇ ಸೆಟ್‌ನ ಎಂಟನೇ ಗೇಮ್‌ನಲ್ಲಿ 15–40 ಹಿನ್ನಡೆಯಲ್ಲಿದ್ದರು. ಆದರೆ ಅಲ್ಲಿಂದ ಚೇತರಿಸಿ ಗೇಮ್ ಗೆದ್ದ ಬಳಿಕ ಅವರು ಪಂದ್ಯದ ಮೇಲೆ ನಿಯಂತ್ರಣ ಪಡೆದರು. ಅವರು 20 ಏಸ್‌ಗಳನ್ನೂ ಸಿಡಿಸಿದರು.

ನಡುಗಿಸುತ್ತಿದ್ದ ಚಳಿಯ ವಾತಾವರಣದಲ್ಲಿ ಆಡುವುದು ಮೊದಲ ದಿನ ಆಟಗಾರರಿಗೆ ಸವಾಲಾಯಿತು.

ಡಬಲ್ಸ್ ಪರಿಣತ ಬಾಲಾಜಿ ಅವರು ಎರಡನೇ ಸಿಂಗಲ್ಸ್‌ನಲ್ಲಿ ಅಖೀಲ್ ಖಾನ್ ಅವರನ್ನು 7–5, 6–3 ರಿಂದ ಹಿಮ್ಮೆಟ್ಟಿಸಿದರು. ಒಂದೂಕಾಲು ಗಂಟೆ ಕಾಲ ನಡೆದ ಈ ಪಂದ್ಯದ ಮಧ್ಯದಲ್ಲಿ ಕೆಲಕಾಲ ಮಳೆಯೂ ಆಗಿತ್ತು. ಮೊದಲ ಸೆಟ್‌ ಮತ್ತು ಎರಡನೇ ಸೆಟ್‌ ನಡುವೆ ಮಳೆಯಾಯಿತು.

ಬಾಲಾಜಿ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದು, ಎರಡೂ ಸೆಟ್‌ಗಳಲ್ಲಿ ತಲಾ ಒಂದು ಬಾರಿ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿದರು.

ಅಂಕಣದಲ್ಲಿ  ಚುರುಕಿನ ಚಲನೆ, ಪ್ರಬಲ ಸರ್ವ್, ನಾಜೂಕು ‘ಡ್ರಾಪ್‌’ಗಳಿಂದ ಅವರು ಹೆಚ್ಚು ಹೋರಾಟವಿಲ್ಲದೇ ಗೆಲುವನ್ನು ದಾಖಲಿಸಿದರು.

ಭಾರತ ಉಳಿದಿರುವ ಮೂರರಲ್ಲಿ (ಡಬಲ್ಸ್‌, ಎರಡು ರಿವರ್ಸ್‌ ಸಿಂಗಲ್ಸ್‌) ಇನ್ನೊಂದು ಪಂದ್ಯ ಗೆದ್ದರೆ ವಿಶ್ವ ಗುಂಪು 1ಕ್ಕೆ ಮುನ್ನಡೆಯಲಿದೆ.

ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಅವರು ಭಾನುವಾರ ನಡೆಯುವ ಡಬಲ್ಸ್ ಪಂದ್ಯದಲ್ಲಿ ಮುಝಾಮಿಲ್ ಮುರ್ತಾಝ– ಬರ್ಕತ್‌ ಉಲ್ಲಾ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.