ADVERTISEMENT

ಸೆಮಿಯಲ್ಲಿ ಅಂಕಿತಾ, ಋತುಜಾ ಮುಖಾಮುಖಿ

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಫ್ರುವಿರ್ತೊವಾ ಜಯಭೇರಿ

ಬಸವರಾಜ ದಳವಾಯಿ
Published 10 ಮಾರ್ಚ್ 2023, 13:10 IST
Last Updated 10 ಮಾರ್ಚ್ 2023, 13:10 IST
ಋತುಜಾ ಭೋಸ್ಲೆ ಆಟದ ಪರಿ– ಪ್ರಜಾವಾಣಿ ಚಿತ್ರ / ಕೃಷ್ಣಕುಮಾರ್ ಪಿ.ಎಸ್.
ಋತುಜಾ ಭೋಸ್ಲೆ ಆಟದ ಪರಿ– ಪ್ರಜಾವಾಣಿ ಚಿತ್ರ / ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಎರಡು ರೋಚಕ ಹಣಾಹಣಿಗಳು, ಎರಡರಲ್ಲಿಯೂ ಟೈಬ್ರೇಕರ್‌, ಇನ್ನೇನು ಸೋತೆಹೋದರು ಎನ್ನುವಷ್ಟರಲ್ಲಿ ಫೀನಿಕ್ಸ್‌ನಂತೆ ಮೇಲೆದ್ದು ಗೆಲುವು ಒಲಿಸಿಕೊಂಡವರು ಭಾರತದ ಆಟಗಾರ್ತಿಯರು..

ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೆಎಸ್‌ಎಲ್‌ಟಿಎ ಕ್ರೀಡಾಂಗಣ. ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯಲ್ಲಿ ಎದುರಾಳಿಗಳ ಬಂಡೆಯಂತಹ ಸವಾಲನ್ನು ಮೀರಿ ಸೆಮಿಫೈನಲ್‌ ತಲುಪಿದವರು ಋತುಜಾ ಭೋಸ್ಲೆ ಮತ್ತು ಅಂಕಿತಾ ರೈನಾ.

ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಶುಕ್ರವಾರ ನಾಲ್ಕನೇ ಶ್ರೇಯಾಂಕದ ಅಂಕಿತಾ 6–1, 6 (7)–7, 7–5ರಿಂದ ಬೋಸ್ನಿಯಾದ ದಿಯಾ ಹರ್ಡ್‌ಜೆಲಸ್‌ ಅವರನ್ನು ಮಣಿಸಿದರು. ಮತ್ತೊಂದು ಸೆಣಸಾಟದಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಋತುಜಾ 3–6, 7– 6 (5), 6–4ರಿಂದ ಎಂಟನೇ ಶ್ರೇಯಾಂಕದ, ಬ್ರಿಟನ್‌ನ ಈಡನ್ ಸಿಲ್ವಾ ಅವರಿಗೆ ಸೋಲುಣಿಸಿದರು.

ADVERTISEMENT

ದಿಯಾ ಎದುರಿನ ಪಂದ್ಯದ ಮೊದಲ ಸೆಟ್‌ನಲ್ಲಿ ಸತತ ಮೂರು ಗೇಮ್‌ ಗೆದ್ದ ಅಂಕಿತಾ, ಸುಲಭ ಜಯದ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಚುರುಕಿನ ಪಾದಚಲನೆ ಮತ್ತು ಬಿರುಸಿನ ಗ್ರೌಂಡ್‌ಸ್ಟ್ರೋಕ್‌ಗಳ ಬಲದಿಂದ ಸೆಟ್‌ಅನ್ನು ಭಾರೀ ಅಂತರದಿಂದ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ ಆಟದ ರಂಗು ಹೆಚ್ಚಿಸಿತು. ಮೊದಲ ಎರಡು ಗೇಮ್‌ ಗೆದ್ದ ಅಂಕಿತಾ, ಮುನ್ನಡೆ ಗಳಿಸಿದರು. ಸೆಟ್‌ನಲ್ಲಿ ಒಂದು ಏಸ್‌ ಸಿಡಿಸಿದ ದಿಯಾ, ಮೂರನೇ ಗೇಮ್‌ ತಮ್ಮದಾಗಿಸಿಕೊಂಡರು. ಮತ್ತೆ ಎರಡು ಗೇಮ್‌ಗಳನ್ನು ಭಾರತದ ಆಟಗಾರ್ತಿ ಗೆದ್ದರು. ಸಾಕಷ್ಟು ಹೊತ್ತು ಪೈಪೋಟಿಯ ಬಳಿಕ ಟೈಬ್ರೇಕ್‌ಗೆ ಸಾಗಿದ ಸೆಟ್‌ ಜಯಿಸಿ ದಿಯಾ ನಿಟ್ಟುಸಿರುಬಿಟ್ಟರು.

ಮೂರನೇ ಸೆಟ್‌ ಇನ್ನಷ್ಟು ರಂಗು ಪಡೆದುಕೊಂಡಿತು. ಮೊದಲ ಗೇಮ್‌ ಅಂಕಿತಾ ಗೆದ್ದರೂ, ಪುಟಿದೆದ್ದ ದಿಯಾ 5–4ಕ್ಕೆ ಗೇಮ್ ಕೊಂಡೊಯ್ದರು. ಒಂದು ಏಸ್‌ ಸಿಡಿಸಿದ ಅವರು ಜಯದ ಭರವಸೆ ಮೂಡಿಸಿದ್ದರು. ಆದರೆ ತಮ್ಮೆಲ್ಲ ಅನುಭವವನ್ನು ಪಣಕ್ಕಿಟ್ಟ ಅಂಕಿತಾ, ಸತತ ಮೂರು ಗೇಮ್‌ ಗೆದ್ದುಕೊಂಡು ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದರು. ಎರಡು ತಾಸು 49 ನಿಮಿಷಗಳ ಕಾಲ ನಡೆದ ಈ ಹಣಾಹಣಿಯು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು.

ಈಡನ್‌ ಎದುರಿನ ಹಣಾಹಣಿಯಲ್ಲಿ ಋತುಜಾ ಮೊದಲ ಸೆಟ್‌ ಕೈಚೆಲ್ಲಿದರು. ಈ ಸೆಟ್‌ನಲ್ಲಿ ಇಬ್ಬರೂ ಆಟಗಾರ್ತಿಯರು ಎರಡು ಡಬಲ್ ಫಾಲ್ಟ್ ಮಾಡಿದರು. ಟೈಬ್ರೇಕ್‌ಗೆ ಸಾಗಿದ ಎರಡನೇ ಸೆಟ್‌ನಲ್ಲಿ ಭಾರತದ ಆಟಗಾರ್ತಿ ಗೆಲುವಿನ ನಗೆ ಬೀರಿದರು. ನಿರ್ಣಾಯಕ ಅಂತಿಮ ಸೆಟ್‌ನಲ್ಲಿ, ಮೊದಲ ಗೇಮ್ ಸೋತರೂ ಛಲಬಿಡದೆ ಜಯ ಒಲಿಸಿಕೊಂಡರು. ಈ ಪಂದ್ಯವೂ ಎರಡು ತಾಸು 46 ನಿಮಿಷ ನಡೆಯಲಿತು.

ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಅಂಕಿತಾ ಮತ್ತು ಋತುಜಾ ಮುಖಾಮುಖಿಯಾಗಲಿದ್ದಾರೆ. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಜೆಕ್‌ ಗಣರಾಜ್ಯದ ಬ್ರೆಂಡಾ ಪುವಿರ್ತೊವಾ ಮತ್ತು ಸ್ಲೊವೇನಿಯಾದ ದಲಿಲಾ ಜಕುಪೊವಿಚ್‌ ಪರಸ್ಪರ ಎದುರಾಗಲಿದ್ದಾರೆ.

ಫ್ರುವಿರ್ತೊವಾ ಗೆಲುವಿನ ಓಟ: ಅಗ್ರ ಶ್ರೇಯಾಂಕದ ಆಟಗಾರ್ತಿ ಬ್ರೆಂಡಾ ಪುವಿರ್ತೊವಾ ಅವರ ಜಯದ ಓಟದ ಮುಂದುವರಿಯಿತು. ಎಂಟರ ಘಟ್ಟದ ಪಂದ್ಯದಲ್ಲಿ 15 ವರ್ಷದ ಆಟಗಾರ್ತಿ 6–0, 7–5ರಿಂದ ಇಂಡೊನೇಷ್ಯಾದ ಪ್ರಿಸ್ಕಾ ಮೇಡ್‌ಲಿನ್‌ ನುಗ್ರೊಹೊ ಅವರನ್ನು ಪರಾಭವಗೊಳಿಸಿದರು. ಪ್ರಿಸ್ಕಾ ಇಲ್ಲಿ ಆರನೇ ಶ್ರೇಯಾಂಕ ಪಡೆದಿದ್ದರು.

ಮತ್ತೊಂದು ಪಂದ್ಯದಲ್ಲಿ ದಲಿಲಾ ಜಕುಪೊವಿಚ್‌ 6–2, 6–0ರಿಂದ ಜಪಾನ್‌ನ ಇಕುಮಿ ಯಮಜಕಿ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದರು.

ಫೈನಲ್‌ಗೆ ಜೋರ್ಜ್‌ ಜೋಡಿ: ಪೋರ್ಚುಗಲ್‌ನ ಫ್ರಾನ್ಸಿಸ್ಕಾ ಜೋರ್ಜ್‌ ಮತ್ತು ಮಟಿಲ್ಡೆ ಜೋರ್ಜ್‌ ಜೋಡಿಯು ಡಬಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟಿತು. ಸೆಮಿಫೈನಲ್ ಪಂದ್ಯದಲ್ಲಿ ಅವರು 2–6, 6–3, 10–8ರಿಂದ ಋತುಜಾ ಭೋಸ್ಲೆ ಮತ್ತು ಸ್ವೀಡನ್‌ನ ಜಾಕ್ವೆಲಿನ್ ಕ್ಯಾಬಾಜ್ ಅವಾಡ್‌ ವಿರುದ್ಧ ಗೆದ್ದರು.

ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಗ್ರೀಸ್‌ನ ವ್ಯಾಲೆಂಟಿನಿ ಗ್ರಾಮಾಟಿಕೊಪುಲು ಮತ್ತು ಈಡನ್ ಸಿಲ್ವಾ 6–1, 6–3ರಿಂದ ಫ್ರಾನ್ಸ್‌ನ ಅಮಂದಾ ಹೆಸ್ಸೆ ಮತ್ತು ಸ್ಲೊವೇನಿಯಾದ ದಲಿಲಾ ಜಕುಪೊವಿಚ್‌ ಎದುರು ಗೆದ್ದು ಪ್ರಶಸ್ತಿ ಸುತ್ತು ತಲುಪಿದರು.

ಫೈನಲ್‌ ಶನಿವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.