ದಾವಣಗೆರೆ: ನಗರದ ಪ್ರಮುಖ ಹೋಟೆಲ್‌ಗಳಲ್ಲಿ ತಯಾರಾಗುವ ಬೆಣ್ಣೆ, ಮಸಾಲೆ ಹೀಗೆ ತರಹೇವಾರಿ ದೋಸೆಗಳ ಸ್ವಾದಕ್ಕೆ ಮಾರು ಹೋಗದವರಿಲ್ಲ.
ಐಟಿಎಫ್ ದಾವಣಗೆರೆ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಅಮೆರಿಕದ ನಿಕ್ ಚಾಪೆಲ್ ಹಾಗೂ ರಷ್ಯಾದ ಬೊಗ್ಡಾನ್ ಬೊಬ್ರೊವ್ ಅವರೂ ಇಲ್ಲಿನ ಹೋಟೆಲ್‌ಗಳಲ್ಲಿ ಸಿಗುವ ದೋಸೆ ಸವಿದು ‘ವಾವ್’ ಎಂದು ಉದ್ಘರಿಸಿದ್ದಾರೆ.
ಐದು ದಿನಗಳಿಂದ ನಗರದಲ್ಲಿ ತಂಗಿರುವ ಇವರು ಪಂದ್ಯ ಮುಗಿದ ನಂತರ ದಾವಣಗೆರೆ ಜಿಲ್ಲಾ ಟೆನಿಸ್ ಸಂಸ್ಥೆಯ ಸನಿಹವಿರುವ ಹೋಟೆಲ್‌ನಲ್ಲಿ ಮಸಾಲೆ ಹಾಗೂ ಬೆಣ್ಣೆ ದೋಸೆ ತಿಂದು, ಒಂದು ಲೋಟ ಟೀ ಹೀರಿ ತಮಗೆ ಕಾಯ್ದಿರಿಸಿರುವ ಹೋಟೆಲ್ ಕೊಠಡಿಗೆ ಹೋಗುವುದು ಸಾಮಾನ್ಯವಾಗಿದೆ.
‘ದಾವಣಗೆರೆಯ ವಾತಾವರಣ ತುಂಬಾ ಹಿಡಿಸಿದೆ. ಇಲ್ಲಿನ ಹೋಟೆಲ್‌ಗಳಲ್ಲಿ ತಯಾರಿಸುವ ದೋಸೆಗಳು ತುಂಬಾ ಸ್ವಾದಿಷ್ಟಕರವಾಗಿವೆ. ನಗರಕ್ಕೆ ಬಂದ ದಿನದಿಂದಲೂ ತಪ್ಪದೆ ದೋಸೆ ತಿನ್ನುತ್ತಿದ್ದೇನೆ’ ಎಂದು ನಿಕ್ ಚಾಪೆಲ್ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.
‘ಕಳೆದ ವಾರ ಧಾರವಾಡಕ್ಕೆ ಭೇಟಿ ಕೊಟ್ಟಿದ್ದಾಗ ಪೇಡಾ ತಿಂದಿದ್ದೆ. ಅದು ಕೂಡಾ ರುಚಿಯಾಗಿತ್ತು. ನಾನು ದಾವಣಗೆರೆ ಹಾಗೂ ಧಾರವಾಡಕ್ಕೆ ಭೇಟಿ ಕೊಟ್ಟಿದ್ದು ಇದೇ ಮೊದಲು’ ಎಂದರು.
‘2018ರಲ್ಲಿ ಪ್ರವಾಸಕ್ಕೆಂದು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೆ. ಆಗ ರಾಜಸ್ಥಾನ, ಉದಯಪುರ, ರಿಷಿಕೇಶ ಮತ್ತು ಆಗ್ರಾಕ್ಕೆ ಭೇಟಿ ಕೊಟ್ಟಿದ್ದೆ. ತಾಜ್‌ಮಹಲ್ ವೀಕ್ಷಿಸಿ ಖುಷಿಪಟ್ಟಿದ್ದೆ’ ಎಂದು ಮೊದಲ ಭೇಟಿಯ ನೆನಪುಗಳನ್ನು ಹಂಚಿಕೊಂಡರು.
‘ಟೆನಿಸ್‌ನಲ್ಲಿ ಭಾರತದ ಆಟಗಾರರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಅವರ ವಿರುದ್ಧ ಆಡುವುದು ಅಷ್ಟು ಸುಲಭವಲ್ಲ’ ಎಂದರು.
ನಿಕ್ ಚಾಪೆಲ್ ಹಾಗೂ ದೇವ್ ಜಾವಿಯಾ ನಡುವೆ ಗುರುವಾರ ಮೊದಲ ‘ಕೋರ್ಟ್’ನಲ್ಲಿ ನಡೆದ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಒಮ್ಮೆ ಜೋರಾಗಿ ಗಾಳಿ ಬೀಸಿತು. ಆಗ ಬಿಸಿಲಿನಿಂದ ರಕ್ಷಣೆ ಒದಗಿಸುವುದಕ್ಕಾಗಿ ಪಂದ್ಯದ ರೆಫರಿಯ ಕುರ್ಚಿಗೆ ಅಳವಡಿಸಲಾಗಿದ್ದ ಬಣ್ಣದ ಕೊಡೆಯೊಂದು ಹಾರಿ ಹೋಗಿ ಪಕ್ಕದ ಅಂಗಳದೊಳಗೆ ಬಿತ್ತು. ಆ ಹೊತ್ತಿಗೆ ಎರಡನೇ ಕೋರ್ಟ್‌ನಲ್ಲಿ ಆಡುತ್ತಿದ್ದ ಆಟಗಾರರು ವಿರಾಮಕ್ಕೆ ಹೋಗಿದ್ದರಿಂದ ಯಾರಿಗೂ ತೊಂದರೆಯಾಗಲಿಲ್ಲ. ಬಳಿಕ ‘ಬಾಲ್ ಬಾಯ್’ವೊಬ್ಬ ಓಡಿಹೋಗಿ ಅದನ್ನು ತೆಗೆದುಕೊಂಡು ಬಂದ. ಪಂದ್ಯ ಮುಗಿಯಲು ಎರಡು ಗೇಮ್‌ಗಳ ಆಟ ಬಾಕಿ ಇದ್ದಿದ್ದರಿಂದ ರೆಫರಿಯು ಕುರ್ಚಿಗೆ ಕೊಡೆ ಅಳವಡಿಸುವ ಗೋಜಿಗೆ ಹೋಗದೆ ಬಿಸಿಲಿನಲ್ಲೇ ಕುಳಿತುಕೊಂಡರು. ಗಾಳಿಯ ರಭಸದಿಂದಾಗಿ ಗ್ಯಾಲರಿಯ ಮೇಲ್ಚಾವಣಿ ಮೇಲಿದ್ದ ಎಲೆ ಹಾಗೂ ಕಸ ಕಡ್ಡಿ ಕೋರ್ಟ್‌ಗೆ ಬಂದು ಬಿದ್ದವು. ಅದನ್ನು ಸ್ವತಃ ದೇವ್ ರೆಫರಿ ಹಾಗೂ ‘ಲೈನ್ ಅಂಪೈರ್’ ತೆರವು ಮಾಡಿದ ಪ್ರಸಂಗವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.