ಬೆಂಗಳೂರು: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ತನಿಶಾ ಕಶ್ಯಪ್ ಅವರು ಭಾನುವಾರ ಮುಕ್ತಾಯಗೊಂಡ ಎಸ್‌ಕೆಎಂಇ ಐಟಿಎಫ್ ಓಪನ್ ಮಹಿಳೆಯರ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಇಲ್ಲಿನ ಕೆಎಸ್‌ಎಲ್‌ಟಿಎ ಟೆನಿಸ್ ಅಂಗಣದಲ್ಲಿ ಭಾರತದ ಆಟಗಾರ್ತಿಯರ ವ್ಯವಹಾರವಾಗಿದ್ದ ಫೈನಲ್‌ನಲ್ಲಿ 22 ವರ್ಷ ವಯಸ್ಸಿನ ಎಂಟನೇ ಶ್ರೇಯಾಂಕದ ತನಿಶಾ 6-7 (5-7), 6-1, 6-1ರಿಂದ ಏಳನೇ ಶ್ರೇಯಾಂಕದ ಆಕಾಂಕ್ಷಾ ನಿಟ್ಟುರೆ ಅವರನ್ನು ಸೋಲಿಸಿ, ಸೀನಿಯರ್ ವಿಭಾಗದ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು.
ಆರಂಭಿಕ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ತನಿಶಾ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲೂ ಚುರುಕಿನ ಆಟ ಪ್ರದರ್ಶಿಸಿದ ಅವರು ಚಾಂಪಿಯನ್ ಕಿರೀಟದೊಂದಿಗೆ ಟ್ರೋಫಿ ಮತ್ತು ₹1.98 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.
‘ವೃತ್ತಿಜೀವನದಲ್ಲಿ ಮೊದಲ ಪ್ರಶಸ್ತಿ ಯಾವಾಗಲೂ ಅದ್ಭುತವಾದುದು. ಇನ್ನಷ್ಟು ಸಾಧನೆಗೆ ಇದು ಪ್ರೇರಣೆಯಾಗಲಿದೆ’ ಎಂದು ತನಿಶಾ ಪ್ರತಿಕ್ರಿಯಿಸಿದರು.
ಒಂದೇ ದಿನ ಮೂರು ಪಂದ್ಯ ಆಡಿ ದಣಿದ ಆಕಾಂಕ್ಷಾ ಅವರಿಗೆ ಡಬಲ್ಸ್‌ನಲ್ಲೂ ನಿರಾಸೆಯಾಯಿತು. ಭಾರತದ ಹುಮೇರಾ ಬಹರ್ಮಸ್ ಮತ್ತು ಪೂಜಾ ಇಂಗಳೆ ಜೋಡಿಯು ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತು.
ಅಗ್ರ ಶ್ರೇಯಾಂಕದ ಹುಮೇರಾ– ಪೂಜಾ ಜೋಡಿಯು 3-6, 6-0, 10-6ರ ಮೂರು ಸೆಟ್‌ಗಳ ಹೋರಾಟದಲ್ಲಿ ಆಕಾಂಕ್ಷಾ ಮತ್ತು ಹಾಲಿ ರಾಷ್ಟ್ರೀಯ ಚಾಂಪಿಯನ್ ಸೋಹಾ ಸಾದಿಕ್ ಅವರನ್ನು ಸೋಲಿಸಿದರು. ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ್ದ ಎರಡನೇ ಶ್ರೇಯಾಂಕದ ಆಕಾಂಕ್ಷಾ– ಸ್ಥಳೀಯ ಪ್ರತಿಭೆ ಸೋಹಾ ಜೋಡಿಯು ನಂತರ ಹಿನ್ನಡೆ ಅನುಭವಿಸಿತು.
ಇದಕ್ಕೂ ಮೊದಲು ಈ ಜೋಡಿ ಸೆಮಿಫೈನಲ್‌ನಲ್ಲಿ 6-7 (6-8), 6-3, 10-6ರಿಂದ ರಷ್ಯಾದ ಅರಿನಾ ಅರಿಫುಲ್ಲಿನಾ ಮತ್ತು ಮಲೇಷ್ಯಾದ ಜೋ ಲೀನ್ ಸಾ ಅವರನ್ನು ಹಿಮ್ಮೆಟ್ಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.