ADVERTISEMENT

‘ತೊಗರಿ ಕಣಜ’ದಲ್ಲಿ ಟೆನಿಸ್‌ ಹಬ್ಬ ಇಂದಿನಿಂದ

ಐಟಿಎಫ್‌ ಟೂರ್ನಿ: ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದ ಕರ್ನಾಟಕದ ರಿಷಿ, ಮನೀಷ್‌

ಮಲ್ಲಪ್ಪ ಪಾರೇಗಾಂವ
Published 16 ನವೆಂಬರ್ 2024, 23:47 IST
Last Updated 16 ನವೆಂಬರ್ 2024, 23:47 IST
   

ಕಲಬುರಗಿ: ‘ತೊಗರಿಯ ಕಣಜ’ ಕಲಬುರಗಿಯು ಐಟಿಎಫ್‌ ಪುರುಷರ ಟೆನಿಸ್‌ ಟೂರ್ನಿಗೆ ಸಜ್ಜಾಗಿದೆ. ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್‌ 17ರಿಂದ 24ರವರೆಗೆ ನಡೆಯುವ ಟೆನಿಸ್‌ ಹಬ್ಬದಲ್ಲಿ ದೇಶ–ವಿದೇಶಗಳ ಆಟಗಾರರು ಕ್ರೀಡಾಪ್ರೇಮಿಗಳಿಗೆ ರಸದೌತಣ ಉಣಬಡಿಸಲಿದ್ದಾರೆ.

ಭಾರತದ ಕರಣ್‌ ಸಿಂಗ್‌, ಆರ್ಯನ್‌ ಷಾ ಹಾಗೂ ಟೂರ್ನಿಯ ಅಗ್ರ ಶ್ರೇಯಾಂಕದ ಆಟಗಾರ ಉಜ್ಬೇಕಿಸ್ತಾನ ದ ಖುಮೋಯುನ್‌ ಸುಲ್ತಾನೋವ್‌, ರಷ್ಯಾದ ಬಾಗ್ದಾನ್‌ ಬಾಬ್‌ರೋವ್‌ ಅವರು ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಕಳೆದ ವರ್ಷ ಇಲ್ಲಿ ನಡೆದ ಟೂರ್ನಿಯ ಸಿಂಗಲ್ಸ್‌ನಲ್ಲಿ ಭಾರತದ ರಾಮಕುಮಾರ್‌ ರಾಮನಾಥನ್‌ ಪ್ರಶಸ್ತಿ ಗೆದ್ದುಕೊಂಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ಬಾರಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ADVERTISEMENT

ಕರ್ನಾಟಕದ ರಿಷಿ ರೆಡ್ಡಿ ಮತ್ತು ಮನೀಷ್‌ ಜಿ. ಹಾಗೂ ಭಾರತದ ಆದಿತ್ಯ ಬಾಲಶೇಖರ, ಯುವಾನ್‌ ನಂದ್ಯಾಳ ಅವರು ಟೂರ್ನಿಯ ಮುಖ್ಯ ಸುತ್ತಿಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ. ಅರ್ಹತಾ ಸುತ್ತಿನ ಪಂದ್ಯಗಳಿಗೆ ಕರ್ನಾಟಕದ ದೀಪಕ ಎ. ಮತ್ತು ಜೇಸನ್‌ ಮೈಕೆಲ್‌ ಡೇವಿಡ್‌ ಹಾಗೂ ಒ. ಜಯಪ್ರಕಾಶ, ರಾಜೇಶ್ವರ ರೆಡ್ಡಿ ಪಟ್ಲೋಲ್ಲ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

‘ಟೂರ್ನಿಯ ಸಿಂಗಲ್ಸ್‌ ಮುಖ್ಯಸುತ್ತಿನಲ್ಲಿ 32 ಆಟಗಾರರು ಹಾಗೂ ಡಬಲ್ಸ್‌ ಮುಖ್ಯಸುತ್ತಿನಲ್ಲಿ 16 ಆಟಗಾರರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಒಂಬತ್ತು ದೇಶಗಳಿಂದ 11 ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಟೂರ್ನಿಯ ಪ್ರಶಸ್ತಿಯ ಒಟ್ಟು ಮೊತ್ತ ₹21.11 ಲಕ್ಷವಾಗಿದೆ. ಭಾನುವಾರದಿಂದ ಅರ್ಹತಾ ಸುತ್ತು ಆರಂಭವಾಗಲಿದ್ದು, ಮಂಗಳವಾರದಿಂದ ಮುಖ್ಯಸುತ್ತಿನ ಪಂದ್ಯಗಳು ನಡೆಯಲಿವೆ. ನ.23ರಂದು ಡಬಲ್ಸ್‌ ವಿಭಾಗದ ಫೈನಲ್‌ ಹಾಗೂ 24ರಂದು ಸಿಂಗಲ್ಸ್‌ ವಿಭಾಗದ ಫೈನಲ್‌ ನಡೆಯಲಿದ್ದು, ಅಂದೇ ಪ್ರಶಸ್ತಿ ವಿತರಿಸಲಾಗುವುದು’ ಎಂದು ಟೂರ್ನಿಯ ನಿರ್ದೇಶಕ ಪೀಟರ್‌ ವಿಜಯಕುಮಾರ್ ಮಾಹಿತಿ ನೀಡಿದರು.ಕಲಬುರಗಿಯಲ್ಲಿ ಇದೀಗ 4ನೇ ಬಾರಿಗೆ ಐಟಿಎಫ್‌ ಟೆನಿಸ್‌ ಟೂರ್ನಿ ನಡೆಯುತ್ತಿದೆ. ಕಲಬುರ್ಗಿಯಲ್ಲಿ 2002, 2015, 2023ರಲ್ಲಿ ಟೂರ್ನಿ ಆಯೋಜನೆಗೊಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.