ಬೆಂಗಳೂರು: ಭಾರತದ ಶರ್ಮದಾ ಬಾಲು ಅವರು ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಬ್ರಿಟನ್‌ನ ಈಡನ್ ಥಿಯೊಡೊರಾ ಕ್ಯಾಡರ್ ಅವರನ್ನು ಎದುರಿಸಲಿದ್ದಾರೆ.
ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯಗಳು ಮಂಗಳವಾರ ಆರಂಭವಾಗಲಿವೆ.
ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿರುವ ಶರ್ಮದಾ ಮತ್ತು ಈಡನ್ ನಡುವಣ ಹಣಾಹಣಿ ಮಂಗಳವಾರ ನಡೆಯಲಿದೆ.
ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಭಾರತದ ಜೀಲ್ ದೇಸಾಯಿ, ಜರ್ಮನಿಯ ಸಾರಾ ರೆಬೆಕ್ಕಾ ಸೆಕುಲಿಚ್ ಎದುರು, ಅಂಕಿತಾ ರೈನಾ, ಭಾರತದವರೇ ಆದ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿರುವ ವಂಶಿತಾ ಪಠಾನಿಯಾ ವಿರುದ್ಧ, ಸಹಜಾ ಯಮಲಪಲ್ಲಿ ಅವರು ಲಾತ್ವಿಯಾದ ಡಯಾನಾ ಮರ್ಸಿಂಕೆವಿಚಾ ಎದುರು, ಋತುಜಾ ಭೋಸ್ಲೆ ಅವರು ಬ್ರಿಟನ್‌ನ ವೆಲೆಂಟಿನಾ ಗ್ರಾಮಾಟಿಕೊಪುಲು ಎದುರು ಆಡಲಿದ್ದಾರೆ.
ಮೊದಲ ಶ್ರೇಯಾಂಕದ ಆಟಗಾರ್ತಿ, ಜೆಕ್ ಗಣರಾಜ್ಯದ, 15 ವರ್ಷದ ಬ್ರೆಂಡಾ ಫ್ರುವಿರ್ತೊವಾ ಅವರು ಚೀನಾ ತೈಪೆಯ ಯಾ ಸುವನ್ ಲೀ ಅವರಿಗೆ ಮುಖಾಮುಖಿಯಾಗುವರು.
ಮಂಗಳವಾರ ನಡೆಯುವ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಸೋಹಾ ಸಾದಿಕ್– ಸಹಜಾ, ಅಂಕಿತಾ ರೈನಾ– ಪ್ರಾರ್ಥನಾ ತೊಂಬಾರೆ, ಶರ್ಮದಾ ಬಾಲು– ಜರ್ಮನಿಯ ಸಾರಾ ರೆಬೆಕ್ಕಾ, ಶ್ರೀವಲ್ಲಿ ರಶ್ಮಿಕಾ– ವೈದೇಹಿ, ಋತುಜಾ– ಸ್ವೀಡನ್‌ನ ಜಾಕ್ವೆಲಿನ್ ಕ್ಯಾಬಜ್ ಅವಾಡ್ ಜೋಡಿಗಳು ಕಣಕ್ಕಿಳಿಯಲಿದ್ದು, ಗೆಲುವಿನ ವಿಶ್ವಾಸದಲ್ಲಿವೆ.
ಪ್ರಧಾನ ಸುತ್ತಿಗೆ ವೈದೇಹಿ: ಉತ್ತಮ ಲಯದಲ್ಲಿರುವ ವೈದೇಹಿ ಚೌಧರಿ ಅವರು ಮಹಿಳಾ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದರು.
ಮಂಗಳವಾರ ನಡೆದ ಅರ್ಹತಾ ಅಂತದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ್ತಿ 6–1, 6–2ರಿಂದ ಥಾಯ್ಲೆಂಡ್‌ನ ಪುನಿನ್ ಕೊವಾಪಿಟುಕೆಡ್ ಅವರನ್ನು ಪರಾಭವಗೊಳಿಸಿದರು.
ಪುನಿನ್ ಅವರ ಬಿರುಸಿನ ಹೊಡೆತಗಳಿಗೆ ಜಾಣತನದ ಆಟದ ಮೂಲಕ ತಿರುಗೇಟು ನೀಡಿದ ವೈದೇಹಿ ಗೆಲುವು ಒಲಿಸಿಕೊಂಡರು.
ಪ್ರಧಾನ ಸುತ್ತಿನ ಮೊದಲ ಹಣಾಹಣಿಯಲ್ಲಿ ವೈದೇಹಿ ಅವರಿಗೆ ಇಂಡೊನೇಷ್ಯಾದ ಪ್ರಿಸ್ಕಾ ಮೇಡ್‌ಲಿನ್ ನುಗ್ರೊಹೊ ಸವಾಲು ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.