ADVERTISEMENT

ITF | ಮಹಿಳೆಯರ ವಿಶ್ವ ಟೆನಿಸ್ ಟೂರ್ನಿ: ‘ಡಬಲ್’ ಪ್ರಶಸ್ತಿ ತವಕದಲ್ಲಿ ಜೆಸ್ಸಿ ಅನೆ

ಫೈನಲ್‌ಗೆ ಲಗ್ಗೆ ಇಟ್ಟ ಅಗ್ರ ಶ್ರೇಯಾಂಕಿತೆ ಶ್ರೀವಲ್ಲಿ

ಆರ್.ಜಿತೇಂದ್ರ
Published 12 ಅಕ್ಟೋಬರ್ 2024, 23:30 IST
Last Updated 12 ಅಕ್ಟೋಬರ್ 2024, 23:30 IST
<div class="paragraphs"><p>ಸಿಂಗಲ್ಸ್‌ ವಿಭಾಗದ ಫೈನಲ್ ಪ್ರವೇಶಿಸಿದ ಅಮೆರಿಕದ ಆಟಗಾರ್ತಿ ಜೆಸ್ಸಿ ಅನೆ</p></div>

ಸಿಂಗಲ್ಸ್‌ ವಿಭಾಗದ ಫೈನಲ್ ಪ್ರವೇಶಿಸಿದ ಅಮೆರಿಕದ ಆಟಗಾರ್ತಿ ಜೆಸ್ಸಿ ಅನೆ

   

ಮೈಸೂರು: ಅಮೆರಿಕದ ಆಟಗಾರ್ತಿ ಜೆಸ್ಸಿ ಅನೆ ಇಲ್ಲಿ ನಡೆದಿರುವ ಮೈಸೂರು ಓಪನ್‌ ಮಹಿಳೆಯರ ಐಟಿಎಫ್‌ ಟೆನಿಸ್ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಸಿಂಗಲ್ಸ್‌ನಲ್ಲಿ ಫೈನಲ್‌ ತಲುಪಿದ್ದಾರೆ.

ಚಾಮರಾಜಪುರಂನ ಮೈಸೂರು ಟೆನಿಸ್‌ ಕ್ಲಬ್‌ (ಎಂಟಿಸಿ) ಅಂಗಳದಲ್ಲಿ ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಜೆಸ್ಸಿ 6–1, 6–0 ಅಂತರದಿಂದ ಲಕ್ಷ್ಮಿಪ್ರಭಾ ಅರುಣ್‌ಕುಮಾರ್‌ ಅವರನ್ನು ಸುಲಭವಾಗಿ ಮಣಿಸಿದರು.

ADVERTISEMENT

ಟೂರ್ನಿಯ ಎರಡನೇ ಶ್ರೇಯಾಂಕಿತೆ ಜೆಸ್ಸಿ ಪಂದ್ಯದ ಮೊದಲ ಸೆಟ್‌ನ ಮೊದಲ ಗೇಮ್‌ನಿಂದಲೂ ಹಿಡಿತ ಸಾಧಿಸಿದರು. ಅರ್ಹತಾ ಸುತ್ತಿನಿಂದ ಸೆಮಿಫೈನಲ್‌ವರೆಗೆ ಅಚ್ಚರಿಯ ಪ್ರದರ್ಶನ ನೀಡಿದ್ದ ಲಕ್ಷ್ಮಿಪ್ರಭಾ, ಅಮೆರಿಕ ಆಟಗಾರ್ತಿಗೆ ಯಾವ ಹಂತದಲ್ಲೂ ಸಾಟಿಯಾಗಲಿಲ್ಲ.

ಸಿಂಗಲ್ಸ್‌ನ ಮತ್ತೊಂದು ಸೆಮಿಫೈನಲ್‌ನಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕಿತೆ ತಮಿಳುನಾಡಿನ ಆರ್‌.ಬಿ. ಶ್ರೀವಲ್ಲಿ 6–3, 6–2ರಲ್ಲಿ ರಿಯಾ ಭಾಟಿಯಾರನ್ನು ಸುಲಭವಾಗಿ ಮಣಿಸಿ ಫೈನಲ್‌ ಪ್ರವೇಶಿಸಿದರು.

ಸೋಹಾಗೆ ನಿರಾಸೆ: ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಜೆಸ್ಸಿ ಹಾಗೂ ರಿಯಾ ಭಾಟಿಯಾ ಜೋಡಿಯು 6–1, 6–1ರಲ್ಲಿ ಕರ್ನಾಟಕದ ಸೋಹಾ ಸಾದಿಕ್ ಹಾಗೂ ಆಕಾಂಕ್ಷಾ ನಿಟ್ಟೂರೆ ಜೋಡಿಯನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು.

ಸೋಹಾ ಹಾಗೂ ಆಕಾಂಕ್ಷಾ ಮೊದಲ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಭಾಟಿಯಾರ ಸರ್ವ್‌ ಮುರಿದು ಪ್ರತಿರೋಧ ತೋರುವ ಪ್ರಯತ್ನ ನಡೆಸಿದರಾದರೂ ನಂತರ ಹೋರಾಟ ಬಿಟ್ಟುಕೊಟ್ಟರು. ಕೇವಲ 53 ನಿಮಿಷದಲ್ಲೇ ಪಂದ್ಯ ಮುಗಿಯಿತು.

ಸಿಂಗಲ್ಸ್‌ ವಿಭಾಗದ ಫೈನಲ್ ಪ್ರವೇಶಿಸಿದ ಆರ್‌.ಬಿ. ಶ್ರೀವಲ್ಲಿ
ಮೈಸೂರು ಓಪನ್‌ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಜೆಸ್ಸಿ ಅನೆ ಹಾಗೂ ರಿಯಾ ಭಾಟಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.