ಟೋಕಿಯೊ: ಅಮೋಘ ಆಟ ಆಡಿದ ಕೀ ನಿಶಿಕೋರಿ, ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಜಪಾನ್‌ನ ನಿಶಿಕೋರಿ 6–4, 6–1ರಲ್ಲಿ ಯುಯಿಚಿ ಸುಗಿಟಾ ವಿರುದ್ಧ ಗೆದ್ದರು.
ಮೊದಲ ಸೆಟ್‌ನ ಆರಂಭದ ಎಂಟು ಗೇಮ್‌ಗಳಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 4–4ರ ಸಮಬಲ ಕಂಡುಬಂತು. ನಂತರ ಮೂರನೇ ಶ್ರೇಯಾಂಕದ ಆಟಗಾರ ನಿಶಿಕೋರಿ ಮಿಂಚಿದರು. ಒಂಬತ್ತನೇ ಗೇಮ್‌ನಲ್ಲಿ ಸರ್ವ್ ಕಾಪಾಡಿಕೊಂಡ ಅವರು ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದು ಸಂಭ್ರಮಿಸಿದರು.
ಎರಡನೇ ಸೆಟ್‌ನಲ್ಲಿ ನಿಶಿಕೋರಿ ಅಬ್ಬರಿಸಿದರು. ಶರವೇಗದ ಸರ್ವ್ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್ ಹೊಡೆತಗಳ ಮೂಲಕ ಸುಗಿಟಾ ಅವರನ್ನು ಕಂಗೆಡಿಸಿ ಗೆಲುವಿನ ತೋರಣ ಕಟ್ಟಿದರು.
ಇನ್ನೊಂದು ಪಂದ್ಯದಲ್ಲಿ ಕೆನಡಾದ ಮಿಲೊಸ್ ರಾವನಿಕ್ 6–3, 6–4ರಲ್ಲಿ ಆ್ಯಡ್ರಿಯನ್ ಮನ್ನಾರಿನೊ ಅವರನ್ನು ಸೋಲಿಸಿದರು.
ಇತರ ಪಂದ್ಯಗಳಲ್ಲಿ ಡೇನಿಯಲ್ ಮೆಡ್ವೆದೇವ್ 6–4, 6–4ರಲ್ಲಿ ಡೀಗೊ ಸ್ವಾರ್ಟ್ಜ್‌ಮನ್ ಎದುರೂ, ಮಾರ್ಟಿನ್ ಕ್ಲಿಜಾನ್ 6–4, 7–6ರಲ್ಲಿ ಸ್ಟೀವ್ ಜಾನ್ಸನ್ ವಿರುದ್ಧವೂ, ಯೊಸುಕೆ ವಾತಾನುಕಿ 6–7, 6–4, 6–1ರಲ್ಲಿ ರಾಬಿನ್ ಹಾಸ್ ಮೇಲೂ, ಬೆನೊಯಿಟ್ ಪೇರ್ 6–4, 7–6ರಲ್ಲಿ ನಿಕೊಲಸ್ ಜೆರಿ ಎದುರೂ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.