ADVERTISEMENT

ಜಪಾನ್ ಓಪನ್ ಟೆನಿಸ್‌: ಸಿಲಿಕ್‌ಗೆ ಆಘಾತ

ಏಜೆನ್ಸೀಸ್
Published 2 ಅಕ್ಟೋಬರ್ 2018, 15:52 IST
Last Updated 2 ಅಕ್ಟೋಬರ್ 2018, 15:52 IST
ಮರಿನ್‌ ಸಿಲಿಕ್‌
ಮರಿನ್‌ ಸಿಲಿಕ್‌   

ಟೋಕಿಯೊ: ಅಗ್ರ ಶ್ರೇಯಾಂಕದ ಆಟಗಾರ ಮರಿನ್‌ ಸಿಲಿಕ್‌, ಜಪಾನ್‌ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಆಘಾತ ಕಂಡಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ 3–6, 6–4, 7–6ರಲ್ಲಿ ಕ್ರೊವೇಷ್ಯಾದ ಸಿಲಿಕ್‌ ಅವರನ್ನು ಸೋಲಿಸಿದರು.

ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದ ಸಿಲಿಕ್‌ ಮೊದಲ ಸೆಟ್‌ನಲ್ಲಿ ಅಮೋಘ ಆಟ ಆಡಿದರು. ಚುರುಕಿನ ಡ್ರಾಪ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಸಿಲಿಕ್‌ಗಿಂತ 50 ಸ್ಥಾನ ಕೆಳಗಿರುವ ಸ್ಟ್ರಫ್‌ ಎರಡನೇ ಸೆಟ್‌ನಲ್ಲಿ ಮೋಡಿ ಮಾಡಿದರು. ಮೊದಲ ಎಂಟು ಗೇಮ್‌ಗಳಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಜರ್ಮನಿಯ ಆಟಗಾರ ನಂತರದ ಎರಡು ಗೇಮ್‌ಗಳಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ಕುತೂಹಲದ ಗಣಿಯಾಗಿದ್ದ ಮೂರನೇ ಸೆಟ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಸಿಲಿಕ್‌ ಬಲಿಷ್ಠ ಏಸ್‌ಗಳನ್ನು ಸಿಡಿಸಿ ಗೆಲುವಿನ ಹಾದಿಯಲ್ಲಿ ಸಾಗಿದ್ದರು. ಆದರೆ ‘ಟೈ ಬ್ರೇಕರ್‌’ನಲ್ಲಿ ಛಲದಿಂದ ಹೋರಾಡಿದ ಸ್ಟ್ರಫ್‌, ಕ್ರೊವೇಷ್ಯಾದ ಆಟಗಾರನ ಜಯದ ಕನಸನ್ನು ಭಗ್ನಗೊಳಿಸಿದರು. ಈ ಹೋರಾಟ ಎರಡು ಗಂಟೆ 18 ನಿಮಿಷ ನಡೆಯಿತು.

ಮುಂದಿನ ಸುತ್ತಿನಲ್ಲಿ ಸ್ಟ್ರಫ್‌, ಫ್ರಾನ್ಸ್‌ನ ಜೆರೆಮಿ ಚಾರ್ಡಿ ವಿರುದ್ಧ ಸೆಣಸಲಿದ್ದಾರೆ. ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಚಾರ್ಡಿ 4–6, 6–3, 6–3ರಲ್ಲಿ ಬೋಸ್ನಿಯಾದ ದಮಿರ್‌ ಜುಮ್‌ಹುರ್‌ ಅವರನ್ನು ಮಣಿಸಿದರು.

ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ 6–3, 6–4ರ ನೇರ ಸೆಟ್‌ಗಳಿಂದ ಅಮೆರಿಕದ ಟೇಲರ್‌ ಫ್ರಿಟ್ಜ್‌ ವಿರುದ್ಧ ಗೆದ್ದರು.

ಇತರ ಪಂದ್ಯಗಳಲ್ಲಿ ಸ್ಟೆಫಾನೊಸ್‌ ಸಿಟ್ಸಿಪಸ್‌ 6–1, 6–3ರಲ್ಲಿ ಟಾರೊ ಡೇನಿಯಲ್‌ ಎದುರೂ, ರಿಚರ್ಡ್‌ ಗ್ಯಾಸ್ಕ್ವೆಟ್‌ 7–6, 6–3ರಲ್ಲಿ ಡೆನಿಸ್‌ ಕುಡ್ಲಾ ಮೇಲೂ, ಫ್ರಾನ್ಸೆಸ್‌ ಟಿಯಾಫೊ 7–5, 6–4ರಲ್ಲಿ ಮ್ಯಾಕ್ಸಿಮಿಲಿಯನ್‌ ಮಾರ್ಟೆರರ್‌ ವಿರುದ್ಧವೂ ವಿಜಯಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.