ಕಲಬುರಗಿ: ಮನಮೋಹಕ ಆಟವಾಡಿದ ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ಅವರು ಕಲಬುರಗಿ ಓಪನ್ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡರು. ಅಗ್ರಶ್ರೇಯಾಂಕದ ಈ ಆಟಗಾರ ರಷ್ಯಾದ ಬಾಗ್ದಾನ್ ಬಾಬ್‌ರೋವ್ ವಿರುದ್ಧ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದರು. ಸುಲ್ತಾನೋವ್‌ಗೆ ಇದು ಈ ಋತುವಿನ ಐದನೇ ಪ್ರಶಸ್ತಿಯಾಗಿದೆ. ಭಾರತದಲ್ಲಿ ಗೆದ್ದ ಎರಡನೇ ಪ್ರಶಸ್ತಿಯಾಗಿದೆ. ಇದೇ ವರ್ಷಾರಂಭದಲ್ಲಿ ಚಂಡೀಗಡದಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.
ಮುಂಬೈ ಐಟಿಎಫ್ ಟೂರ್ನಿಯಲ್ಲಿ ಪ್ರಶಸ್ತಿ ಹಂತದಲ್ಲಿ ಎಡವಿದ್ದ ಸುಲ್ತಾನೋವ್, ಇಲ್ಲಿ ತಪ್ಪುಗಳನ್ನು ತಿದ್ದಿಕೊಂಡರು. ಟ್ರೋಫಿಯೊಂದಿಗೆ ₹ 3 ಲಕ್ಷ ಬಹುಮಾನ ಹಾಗೂ 25 ಎಟಿಪಿ ಅಂಕಗಳು ಅವರ ಖಾತೆಗೆ ಸೇರಿದವು. ರನ್ನರ್ ಅಪ್ ಬಾಬ್‌ರೋವ್, ₹ 1.79 ಲಕ್ಷ ನಗದು ಹಾಗೂ 16 ಎಟಿಪಿ ಅಂಕಗಳನ್ನು ಗಳಿಸಿದರು. ಕಳೆದ ಬಾರಿ ತಮಿಳುನಾಡಿನ ರಾಮಕುಮಾರ್ ರಾಮನಾಥನ್ ಚಾಂಪಿಯನ್ ಆಗಿದ್ದರು.
ಇಲ್ಲಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಸುಲ್ತಾನೋವ್ ಅವರಿಗೆ ಬಾಬ್‌ರೋವ್ ಸುಲಭ ತುತ್ತಾದರು. ಅವರು 6–2, 6–1ರಿಂದ ಎರಡನೇ ಶ್ರೇಯಾಂಕದ ಆಟಗಾರರನ್ನು ಮಣಿಸಿದರು. ಪಂದ್ಯದಲ್ಲಿ ಸುಲ್ತಾನೋವ್ ಸತತ 9 ಗೇಮ್‌ಗಳನ್ನು ಗೆದ್ದು ಪ್ರಾಬಲ್ಯ ಮೆರೆದರು.
ಮುಂಬೈ ಟೂರ್ನಿಯ ಸೋಲಿನ ಸೇಡನ್ನು ಇಲ್ಲಿ ತೀರಿಸಬೇಕೆಂಬ ಹುಮ್ಮಸ್ಸಿನಿಂದ ಅಂಗಣಕ್ಕಿಳಿದ ಬಾಬ್‌ರೋವ್ ಆಸೆ ಈಡೇರಲಿಲ್ಲ. ಸುಲ್ತಾನೋವ್ ಬಿರುಸಿನ ಹೊಡೆತಗಳಿಗೆ ಮಾರುತ್ತರ ನೀಡುವಲ್ಲಿ ಬಾಬ್‌ರೋವ್ ಅವರಿಗೆ ಸಾಧ್ಯವಾಗಲಿಲ್ಲ.
ಆರಂಭಿಕ ಸೆಟ್‌ನ ಮೊದಲ ನಾಲ್ಕು ಗೇಮ್‌ಗಳಲ್ಲಿ ಇಬ್ಬರೂ ಸಮಬಲ ಸಾಧಿಸಿದರು. ನಂತರ ಬಾಬ್‌ರೋವ್ ಅವರು ಮೇಲಿಂದ ಮೇಲೆ ತಪ್ಪುಗಳನ್ನು ಎಸಗಿದರು. ಈ ಹಂತದಲ್ಲಿ ಅವರಿಗೆ ಆತ್ಮವಿಶ್ವಾಸದ ಕೊರತೆ ಕಾಡಿತು. ಇದರ ಫಲವಾಗಿ ಎದುರಾಳಿ ಸುಲ್ತಾನೋವ್ ಸತತವಾಗಿ 4 ಗೇಮ್‌ಗಳಲ್ಲಿ ಗೆದ್ದು ಮೊದಲ ಸೆಟ್ ತಮ್ಮದಾಗಿಸಿಕೊಂಡರು.
ಎರಡನೇ ಸೆಟ್‌ನಲ್ಲಿಯೂ ರಷ್ಯಾದ ಆಟಗಾರ ಲಯಕ್ಕೆ ಮರಳಲಿಲ್ಲ. ಹತಾಶೆ ಮತ್ತು ಒತ್ತಡಕ್ಕೊಳಗಾದಂತೆ ಕಂಡುಬಂದರು ಬಾಬ್‌ರೋವ್. ಪ್ರಾಬಲ್ಯ ಮುಂದುವರಿಸಿದ ಸುಲ್ತಾನೋವ್ ಸೆಟ್ ಗೆದ್ದು ಪಂದ್ಯವನ್ನೂ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.