ADVERTISEMENT

ಭಾವುಕ ಬಾರ್ಬೊರಾಗೆ ವಿಂಬಲ್ಡನ್ ಕಿರೀಟ

ಹುಲ್ಲಿನಂಕಣದಲ್ಲಿ ಪಾರಮ್ಯ ಮೆರೆದ ಝೆಕ್ ಆಟಗಾರ್ತಿ; ಪಾವೊಲಿನಿಗೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 21:55 IST
Last Updated 13 ಜುಲೈ 2024, 21:55 IST
ಝೆಕ್ ಗಣರಾಜ್ಯದ ಬಾರ್ಬೊರಾ ಕ್ರೆಚಿಕೊವಾ ಅವರ ಸರ್ವ್‌   –ಎಎಫ್‌ಪಿ ಚಿತ್ರ
ಝೆಕ್ ಗಣರಾಜ್ಯದ ಬಾರ್ಬೊರಾ ಕ್ರೆಚಿಕೊವಾ ಅವರ ಸರ್ವ್‌   –ಎಎಫ್‌ಪಿ ಚಿತ್ರ   

ಲಂಡನ್ : ಝೆಕ್ ಗಣರಾಜ್ಯದ ಬಾರ್ಬೊರಾ ಕ್ರೆಚಿಕೋವಾ ಶನಿವಾರ ವಿಂಬಲ್ಡನ್ ಕಿರೀಟ ಧರಿಸಿದರು. 

ಇದು ಅವರಿಗೆ ಎರಡನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಯಾಗಿದೆ. 2021ರಲ್ಲಿ ಅವರು ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು. 26 ವರ್ಷಗಳ ಹಿಂದೆ ಇದೇ  ಅಂಕಣದಲ್ಲಿ ಬಾರ್ಬೊರಾ ಅವರ ಮೆಂಟರ್ ಯಾನಾ ನವೊತ್ನಾ ಅವರು ಚಾಂಪಿಯನ್ ಆಗಿದ್ದರು. ನವೋತ್ನಾ 2017ರಲ್ಲಿ ನಿಧನರಾಗಿದ್ದಾರೆ. 

ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಫೈನಲ್‌ನಲ್ಲಿ 31ನೇ ಶ್ರೇಯಾಂಕದ ಬಾರ್ಬೊರಾ 6–2, 2–6, 6–4ರಿಂದ ಏಳನೇ ಶ್ರೇಯಾಂಕದ ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು ಮಣಿಸಿದರು. 

ADVERTISEMENT

ಹೋದ ತಿಂಗಳು ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿಯೂ ಪಾವೊಲಿನಿ ಅವರು ಇಗಾ ಶ್ವಾಂಟೆಕ್ ವಿರುದ್ಧ ಸೋತಿದ್ದರು. ಸತತ ಎರಡನೇ ಫೈನಲ್‌ನಲ್ಲಿ ಅವರು ನಿರಾಶೆ ಅನುಭವಿಸಿದಂತಾಗಿದೆ. 

ಈ ಪಂದ್ಯದ ಆರಂಭಿಕ ಸೆಟ್‌ನಲ್ಲಿಯೇ ಪಂದ್ಯವನ್ನು ತಮ್ಮ ಹಿಡಿತಕ್ಕೆ ಪಡೆಯುವಲ್ಲಿ ಝೆಕ್ ಆಟಗಾರ್ತಿ ಯಶಸ್ವಿಯಾದರು. ಮೊದಲ ಗೇಮ್‌ ಬ್ರೇಕ್‌ ಮಾಡಿದರು.  ಇದೇ ಸೆಟ್‌ನಲ್ಲಿ ಅವರು 4–1ರ ಮುನ್ನಡೆಯತ್ತ ಸಾಗಿದರು. ಈ ಹಂತದಲ್ಲಿ ತುಸು ಹೋರಾಟ ನಡೆಸಿದ ಪಾವೊಲಿನಿಗೆ ಮತ್ತೊಂದು ಗೇಮ್ ಮಾತ್ರ ಜಯಿಸಲು ಸಾಧ್ಯವಾಯಿತು. 35 ನಿಮಿಷ ನಡೆದ ಈ ಸೆಟ್‌ನಲ್ಲಿ ಬಾರ್ಬೊರಾ ಮೇಲುಗೈ ಸಾಧಿಸಿದರು. ಅವರು ಇದರಲ್ಲಿ ಒಟ್ಟು 10 ವಿನ್ನರ್ಸ್‌ ಹೊಡೆದರೆ, ಇಟಲಿಯ ಆಟಗಾರ್ತಿ ಐದು ಬಾರಿ ದಾಖಲಿಸಿದರು. 

ಸೆಟ್ ನಂತರ ‘ಶೌಚ ವಿರಾಮ’ ಪಡೆದು ಮರಳಿದ ಪಾವೊಲಿನಿ ಎರಡನೇ ಸೆಟ್‌ನಲ್ಲಿ ಅಪಾರ ಉತ್ಸಾಹದಿಂದ ಆಡಿದರು. ಅವರ ಚುರುಕಾದ ಆಟದ ಮುಂದೆ ಬಾರ್ಬೊರಾ ಅವರು 14 ಬಾರಿ ಎರರ್ ಮಾಡಿದರು. ಈ ಸೆಟ್‌ನಲ್ಲಿ ಅವರು ಕೇವಲ ನಾಲ್ಕು ವಿನ್ನರ್  ಹೊಡೆದರು. ಎರಡನೇ ಸೆಟ್ ಪಾವೊಲಿನಿ ಪಾಲಾಯಿತು. 

ಆದರೆ ಅಮೋಘ ರೀತಿಯಲ್ಲಿ ತಿರುಗೇಟು ನೀಡಿದ ಬಾರ್ಬೊರಾ  ಚುರುಕುತನದ ಆಟಕ್ಕೆ ಪಾವೊಲಿನಿ ಬಳಿ ಉತ್ತರವಿರಲಿಲ್ಲ. ಇದರಿಂದಾಗಿ ಮೂರನೇ ಸೆಟ್ ಜಯಿಸಿದ ಬಾರ್ಬೊರಾ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದರು. 

ಯಾನಾ ನೆನಪು: ‘ಯಾನಾ ನಿಧನರಾಗುವ ಮುನ್ನ ಸ್ಲಾಂ ಪ್ರಶಸ್ತಿ ಜಯಿಸು ಎಂದು ಹೇಳಿದ್ದರು. ಮೂರು ವರ್ಷಗಳ ಹಿಂದೆ ಫ್ರೆಂಚ್ ಓಪನ್ ಗೆದ್ದೆ. ಈಗ ವಿಂಬಲ್ಡನ್. ನನ್ನ ಬಾಲ್ಯದ ಪ್ರೇರಣೆ ಯಾನಾ. ಟೆನಿಸ್‌ನಲ್ಲಿ ನಾನು ಬೆಳೆಯಲು ಅವರ ಮಾರ್ಗದರ್ಶನ ಮಹತ್ವದ್ದು’ ಎಂದು ಪಂದ್ಯದ ನಂತರ ಅಧಿಕೃತ ಪ್ರಸಾರಕ ವಾಹಿನಿಯ ಸಂದರ್ಶನದಲ್ಲಿ ಹೇಳಿದ ಬಾರ್ಬೊರಾ ಕಣ್ಣೀರು ಹಾಕಿದರು.

ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಕೂಡ ಎದ್ದು ನಿಂತು ಗೌರವ ಸಲ್ಲಿಸಿದರು. 

ನೆದರ್ಲೆಂಡ್ಸ್‌ನ ದೀದಿ ಡಿ ಗ್ರೂಟ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ನಡೆದ  ವ್ಹೀಲ್‌ಚೇರ್ ಮಹಿಳೆಯರ ಫೈನಲ್‌ನಲ್ಲಿ ಅನೀಕ್ ವ್ಯಾನ್ ಕೂಟ್ ಅವರನ್ನು ಸೋಲಿಸಿ ಪ್ರಶಸ್ತಿ ಗಳಿಸಿದರು  –ಎಪಿ/ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.