ಮೆಲ್ಬರ್ನ್: ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್ ಅವರಿಗೆ ತಿಂಗಳ ಹಿಂದೆ ಕೋವಿಡ್–19 ಸೋಂಕು ತಗುಲಿತ್ತು ಎಂದು ವಕೀಲರು ಸಲ್ಲಿಸಿರುವ ದಾಖಲೆಗಳಿಂದ ಸಾಬೀತಾಗಿದೆ ಎಂದು ಶನಿವಾರ ವರದಿಯಾಗಿದೆ.
ಲಸಿಕೆ ಹಾಕಿಸಿಕೊಳ್ಳದೇ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಬಂದ ಜೊಕೊವಿಚ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ವಿರುದ್ಧ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ಸಂಬಂಧಿಸಿ ಸಲ್ಲಿಸಿರುವ ದಾಖಲೆಗಳಲ್ಲಿ ಕೋವಿಡ್‌ಗೆ ಸಂಬಂಧಿಸಿದ ಮಾಹಿತಿ ಇದೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ಶನಿವಾರ ವರದಿ ಮಾಡಿದೆ.
‘34 ವರ್ಷದ ಜೊಕೊವಿಚ್ ಈಚೆಗೆ ಕೋವಿಡ್‌ನಿಂದ ಗುಣಮುಖರಾಗಿದ್ದ ಆಧಾರದಲ್ಲಿ ಟೆನಿಸ್ ಆಸ್ಟ್ರೇಲಿಯಾವು ಜನವರಿ ಒಂದರಂದು ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಅವಕಾಶ ನೀಡಿತ್ತು. ಕೋವಿಡ್ ಲಸಿಕೆ ಪಡೆಯುವುದರಿಂದ ಅವರಿಗೆ ವೈದ್ಯಕೀಯ ರಿಯಾಯಿತಿ ನೀಡಲಾಗಿತ್ತು‘ ಎಂದು ವಕೀಲರು ಸಲ್ಲಿಸಿದರುವ ದಾಖಲೆಯಲ್ಲಿದೆ ಎಂದು ಎಬಿಸಿ ತಿಳಿಸಿದೆ.
ಜೊಕೊವಿಚ್ ಅವರ ವಿಸಾವನ್ನು ರದ್ದು ಮಾಡಲಾಗಿದೆ. ಆಸ್ಟ್ರೇಲಿಯಾದ ಅಧಿಕಾರಿಗಳು ಇದನ್ನು ಪುನರ್‌ಪರಿಶೀಲಿಸದೇ ಇದ್ದರೆ ಅಥವಾ ಪೂರಕ ದಾಖಲೆಗಳನ್ನು ಸಲ್ಲಿಸದೇ ಇದ್ದರೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ಇರುವುದಿಲ್ಲ. ಕೋವಿಡ್ ನಿಯಮಗಳ ಪ್ರಕಾರ 3 ಆವೃತ್ತಿಗಳಲ್ಲಿ ಆಡುವ ಅಕವಾಶ ಕಳೆದುಕೊಳ್ಳಲಿದ್ದಾರೆ.
ಜೊಕೊವಿಚ್ ಸವಾಲು
ಆಸ್ಟ್ರೇಲಿಯಾ ಅಧಿಕಾರಿಗಳ ಕ್ರಮದ ವಿರುದ್ಧ ಸವಾಲು ಹಾಕಿರುವ ಜೊಕೊವಿಚ್ ಅವರು ಟೂರ್ನಿಯ ಆಯೋಜಕರು ತಮಗೆ ಡಿಸೆಂಬರ್ 30ರಂದು ಹಸಿರು ನಿಶಾನೆ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಇದರ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಕೈಗೆತ್ತಿಕೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.