ಮಿಗಳ ದಿನ’ವು ಕತ್ತಲೆಯ ಕೈಹಿಡಿದು ಮೆಲ್ಲಗೆ ತೆರೆಮರೆಗೆ ಸರಿಯುವ ಹೊತ್ತಿನಲ್ಲಿ ‘ಲವ್ ಗೇಮ್’ ಎಂದೇ ಕರೆಯಲಾಗುವ ಟೆನಿಸ್‌ನ ವಿಶಿಷ್ಟ ರಾಯಭಾರಿ ಲಿಯಾಂಡರ್ ಪೇಸ್ ಮನದ ಮಾತಿನ ಮುತ್ತುಗಳು ಕೇಳುಗರ ಹೃದಯಗಳನ್ನು ನೆನಪಿನ ಮಾಲೆ ಯಾಗಿ ಅಲಂಕರಿಸಿದವು. ಟೆನಿಸ್ ರಂಗದಲ್ಲಿ ಮೂರು ದಶಕಗಳ ಸುದೀರ್ಘ ಪಯಣದ ಒಂದೊಂದು ಹಂತವನ್ನೂ ಬಿಚ್ಚಿಟ್ಟರು. 46ರ ಹರೆಯದ ಪರಿಪಕ್ವ ಮನಸ್ಥಿತಿ, ತಲಸ್ಪರ್ಶಿ ನಡವಳಿಕೆ, ಸಾಗಿ ಬಂದ ಹಾದಿಯಲ್ಲಿ ಬೆನ್ನು ತಟ್ಟಿದವರಿಗೆ ಸಲ್ಲಿಸಿದ ಕೃತಜ್ಞತೆಯ ಪರಿ ಮತ್ತು ಭವಿಷ್ಯದ ಬದುಕಿನ ಹೊಳಹು ವ್ಯಕ್ತವಾದ ಸಂಜೆ ಅದು. ಪತ್ರಕರ್ತೆ ಪ್ರಜ್ವಲ್ ಹೆಗಡೆ ಕಾರ್ಯಕ್ರಮ ನಡೆಸಿಕೊಟ್ಟರು.
ಟೆನಿಸ್‌ಗೆ ಬಂದಿದ್ದು..
ಕೋಲ್ಕತ್ತದಲ್ಲಿ ಜನಿಸಿದ ಲಿಯಾಂಡರ್‌ಗೆ ಸಹಜವಾಗಿಯೇ ಫುಟ್‌ಬಾಲ್ ಆಕರ್ಷಿಸಿತ್ತು. ಆದರೆ, ಬಾಲ್ಯದಲ್ಲಿ ಆಡುವಾಗ ಬಲಮೊಣಕಾಲಿನ ಅಸ್ಥಿಮಜ್ಜೆಯಲ್ಲಿ ನೋವು ಕಾಡಿತು. ಫುಟ್‌ಬಾಲ್ ಆಟದಿಂದಾದ ಗಾಯ ಅದು. ಆದರೆ, ಚಿಕಿತ್ಸೆ ಪಡೆದ ನಂತರ ಅವರಿಗೆ ಬಂದ ಯೋಚನೆಯೇ ಬೇರೆ. ಫುಟ್‌ಬಾಲ್ ಗೆ ಮರಳಬಹುದು. ಆದರೆ, ಅಪ್ಪ–ಅಮ್ಮನಂತೆ ಒಲಿಂಪಿಯನ್ ಆಗಲು ಸಾಧ್ಯವೇ? ಭಾರತದ ಫುಟ್‌ಬಾಲ್ ತಂಡ ಆ ಮಟ್ಟಕ್ಕೆ ಹೋಗುವುದೇ? ಎಂಬ ಪ್ರಶ್ನೆಗಳು ಕಾಡಿದವು. ಅದಕ್ಕಾಗಿಯೇ ಟೆನಿಸ್‌ನತ್ತ ಒಲವು ಬೆಳೆಯಿತು. ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ಅಪ್ಪ ವೆಸ್ ಪೇಸ್ ಮತ್ತು ಒಲಿಂಪಿಯನ್ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಜೆನ್ನಿಫರ್ ಮಗನ ಆಸೆಗೆ ಪ್ರೋತ್ಸಾಹದ ನೀರೆರೆದರು. ಆ ಕಾಲದಲ್ಲಿ ಆರಡಿಗಿಂತಲೂ ಹೆಚ್ಚು ಎತ್ತರದ ಆಟಗಾರರೇ ಟೆನಿಸ್ ಲೋಕ ವನ್ನು ಆಳುತ್ತಿದ್ದರು. 5.10 ಅಡಿ ಎತ್ತರದ ಪೇಸ್‌ಗೆ ಇದು ಕೂಡ ಸವಾಲೇ ಆಗಿತ್ತು.
ನೆರಳು–ಬೆಳಕಿನ ಆಟ..
1986ರಲ್ಲಿ ಚೆನ್ನೈನ ಬ್ರಿಟಾನಿಯಾ ಅಮೃತರಾಜ್ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಪೇಸ್‌ಗೆ ಸಿಕ್ಕಿದ್ದು ಅವರ ಜೀವನಕ್ಕೆ ಲಭಿಸಿದ ತಿರುವು. 13 ವರ್ಷದ ಬಾಲಕನಲ್ಲಿ ಟೆನಿಸ್ ಆಟಕ್ಕೆ ಹೊಂದಿಕೊಳ್ಳುವಂತಹ ಸಹಜ ಪ್ರತಿಭೆಯೇನೂ ಇರಲಿಲ್ಲ. ಅವರೊಂದಿಗೆ ಏಷ್ಯಾದ ಏಳು ಶ್ರೇಷ್ಠ ಜೂನಿಯರ್ ಆಟಗಾರರೂ ಇದ್ದರು. ಆದರೆ ತಮ್ಮ ದೌರ್ಬಲ್ಯವನ್ನು ಸಾಮರ್ಥ್ಯವನ್ನಾಗಿ ಬದಲಿಸಿಕೊಂಡರು. ಪ್ರತಿದಿನ ಬೆಳಿಗ್ಗೆ 4.30ಕ್ಕೆ ದಿನಚರಿ ಆರಂಭವಾಗುತ್ತಿತ್ತು. ಐದರಿಂದ ಎಂಟು ಗಂಟೆಯವರೆಗೆ ಟೆನಿಸ್ ಅಭ್ಯಾಸ, ಒಂದು ತಾಸು ತಿಂಡಿ ಸೇವನೆಯ ಸಮಯ. 9ರಿಂದ ಮಧ್ಯಾಹ್ನ 3.30ರವರೆಗೆ ಶಾಲೆ, ಸಂಜೆ ನಾಲ್ಕರಿಂದ ಏಳರವರೆಗೆ ತರಬೇತಿ. ನಂತರ ಹೋಮ್‌ವರ್ಕ್, ರಾತ್ರಿಯ ಊಟವಾಗುವ ಹೊತ್ತಿಗೆ 11.30 ಆಗುತ್ತಿತ್ತು.ಆದರೆ ಲಿಯಾಂಡರ್ ತಮ್ಮ ಕೋಣೆಯಲ್ಲಿದ್ದ ಎತ್ತರದ ನಿಲುವುಗನ್ನಡಿಯ ಮುಂದೆ ಮೊಂಬತ್ತಿಗಳನ್ನು ಹಚ್ಚಿಡುತ್ತಿದ್ದರು. ಆ ಬೆಳಕಿನ ಬಿಂಬದಲ್ಲಿ ಮೂಡುತ್ತಿದ್ದ ನೆರಳಿನ ಬಿಂಬಗಳಿಗೆ ಎದುರಾಗಿ ಬರಿಗೈನಲ್ಲಿ ಟೆನಿಸ್ ಹೊಡೆತಗಳ ಅಭ್ಯಾಸ ನಡೆಸುತ್ತಿದ್ದರು. ಅದನ್ನೇ ಅಂಕಣದಲ್ಲಿ ರ‍್ಯಾಕೆಟ್‌ನೊಂದಿಗೆ ಪುನರಾವರ್ತಿಸುತ್ತಿದ್ದರು. ಹೃದಯದ ಸಮಸ್ಯೆಗೂ ಜಗ್ಗಲಿಲ್ಲ. ಬಹಳಷ್ಟು ವೈದ್ಯರು ಎಚ್ಚರಿಕೆ ನೀಡಿದ್ದರು. ಆದರೆ ಡಾ. ಚೆರಿಯನ್ ಕ್ರೀಡಾ ವೈದ್ಯಕೀಯದ ಬಗ್ಗೆ ಪಾಠ ಹೇಳಿ ಆತ್ಮವಿಶ್ವಾಸ ತುಂಬಿದರು.
ಮೊದಲ ಗೆಲುವು..
ಮೂರು ದಶಕಗಳಲ್ಲಿ ಹಲವಾರು ಪಂದ್ಯಗಳನ್ನು ಗೆದ್ದಿರುವೆ. ಆದರೆ, 1990ರ ಫೆಬ್ರುವರಿ 2ರಂದು ಡೇವಿಸ್ ಕಪ್ ಟೂರ್ನಿಯಲ್ಲಿ ಪದಾರ್ಪಣೆ ಪಂದ್ಯ ಗೆದ್ದಾಗಿನ ಪುಳಕ ಇಂದಿಗೂ ಅವಿಸ್ಮರಣೀಯ. ‘ಆಗಿನ್ನೂ ನನಗೆ 16 ವರ್ಷ. ಆಸ್ಟ್ರೇಲಿಯಾ ಓಪನ್ ಜೂನಿಯರ್ ಟೂರ್ನಿಯಲ್ಲಿ ಆಡುತ್ತಿದ್ದಾಗ, ಭಾರತ ತಂಡದಿಂದ ಟೆಲಿಗ್ರಾಮ್ ಸಂದೇಶ ಬಂದಿತ್ತು. ನಾನು ನಂಬಿರಲಿಲ್ಲ. ಯಾರೋ ಸ್ನೇಹಿತರು ಜೋಕ್ ಮಾಡಲು ಹೀಗೆ ಮಾಡಿರಬಹದು ಎಂದುಕೊಂಡು ತಂದೆಗೆ ಫೋನು ಮಾಡಿ ಕೇಳಿದ್ದೆ. ಆದರೆ, ಅವರು ಸಂದೇಶ ನಿಜ ಎಂದಿದ್ದರು. ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಬಂದು ಚಂಡೀಗಡಕ್ಕೆ ರೈಲಿನಲ್ಲಿ ಹೋಗಿದ್ದೆ. ನರೇಶ್ ಕುಮಾರ್ ಮತ್ತು ಅವರ ಪತ್ನಿ ಸುನಿತಾ ರೈಲ್ವೆ ನಿಲ್ದಾಣಕ್ಕೆ ಬಂದು ಕರೆದೊಕೊಂಡು ಹೋಗಿದ್ದರು. ಪಂದ್ಯದ ಸಂದರ್ಭದಲ್ಲಿ ಜೀಶಾನ್ ಅಲಿ ಕಡೆ ತರಿಸಿದ್ದ ಚಿಕನ್ ಬಿರಿಯಾನಿ ತಿಂದಿದ್ದು ಮೆರಯುವುದಾದರೂ ಹೇಗೆ’ ಎಂದು ನೆನಪಿಸಿಕೊಳ್ಳುತ್ತಾರೆ.
ಮಹೇಶ್ ಒಡನಾಟ..
ಮಹೇಶ್ ಭೂಪತಿ ಮತ್ತು ಪೇಸ್ ಅವರ ಜೋಡಿಯು ಭಾರತಕ್ಕೆ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಗೆದ್ದುಕೊಟ್ಟಿದ್ದು ಇತಿಹಾಸ. ಭಾರತದ ಯಾವ ಆಟಗಾರರೂ ಮಾಡದ ಸಾಧನೆಯದು. ಆದರೆ ಅವರಿಬ್ಬರ ನಡುವೆ ತಲೆದೋರಿದ್ದ ವೈಮನಸ್ಸು ಕೂಡ ಅಷ್ಟೇ ಸುದ್ದಿ ಮಾಡಿತ್ತು. ಆದರೆ ನಿವೃತ್ತಿಯ ಅಂಚಿನಲ್ಲಿರುವ ಪೇಸ್ ಅದೆಲ್ಲವನ್ನೂ ಮರೆತಿದ್ದಾರೆ. ‘90ರ ದಶಕದಲ್ಲಿ ನಾವಿಬ್ಬರು ಯುವ ಆಟಗಾರರು ಜೊತೆಯಾಗಿದ್ದೇ ಇತಿಹಾಸ ರಚಿಸಲು. ನಮ್ಮಿಬ್ಬರ ಆಟದ ಶೈಲಿ, ವ್ಯಕ್ತಿತ್ವ, ಸ್ವಭಾವ ಮತ್ತು ತತ್ವಗಳು ಸಂಪೂರ್ಣ ಬೇರೆ ಬೇರೆಯಾಗಿದ್ದವು. ಆದರೂ ನಾವು ಒಳ್ಳೆಯ ಸ್ನೇಹಿತರು. ನಾನು 105 ಸಲ ಶೋಲೆ ಚಲನಚಿತ್ರ ನೋಡಿದ್ದೆ. ಅದರಲ್ಲಿ 15–16 ಬಾರಿ ಮಹೇಶ್ ನನ್ನ ಜೊತೆಗಿದ್ದರು. ಕಿಶೋರ್ ಕುಮಾರ್ ಹಾಡು ಜೊತೆಯಾಗಿ ಕೇಳಿದ್ದೇವೆ. ಒಂದೇ ತಟ್ಟೆಯಲ್ಲಿ ಹಂಚಿಕೊಂಡು ಊಟ ಮಾಡಿದ್ದೇವೆ. ಇವತ್ತಿಗೂ ಅವರು ನನ್ನ ಮುಂದೆ ಬಂದರೆ ಅದೇ ಗೌರವ, ಪ್ರೀತಿ ಇದೆ. ಮಹೇಶ್ ಒಡನಾಟದಲ್ಲಿ ಕಲಿತದ್ದು ಅಪಾರ’ ಎಂದರು.
ಡಾಕ್ಟರ್ ಆಗಿದ್ದು..
ಅಪ್ಪ ವೆಸ್ ಪೇಸ್ ಒಲಿಂಪಿಯನ್ ಹಾಕಿಪಟುವಾಗಿದ್ದರೂ ವೃತ್ತಿಯಿಂದ ವೈದ್ಯರು. ಅವರೊಂದಿಗೆ ಊಟದ ಮೇಜಿಗೆ ಕುಳಿತುಕೊಳ್ಳಲು ಒಲಿಂಪಿಯನ್ ಆಗಬೇಕು ಎಂದು ಮಗನಿಗೆ ಶರತ್ತು ಹಾಕಿದ್ದರು. 1996ರಲ್ಲಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಬಂದ ಲಿಯಾಂಡರ್ ‘ಈಗ ನಿಮ್ಮೊಂದಿಗೆ ಊಟಕ್ಕೆ ಕುಳಿತುಕೊಳ್ಳಲು ಅರ್ಹ’ ಎಂದರು. ಆಗ ವೆಸ್ ಪೇಸ್, ‘ಆದರೆ ನೀನು ವೈದ್ಯನಾಗಿಲ್ಲ. ಅದೊಂದು ಕೊರತೆ ಇದೆ’ ಎಂದರು. ಅದನ್ನು ಸವಾಲಾಗಿ ಸ್ವೀಕರಿಸಿದ ಲಿಯಾಂಡರ್, ಡಿ.ವೈ.ಪಾಟೀಲ್ ಯುನಿವರ್ಸಿಟಿಯಲ್ಲಿ ಪ್ರೇರಣಾದಾಯಕ ಉಪನ್ಯಾಸಗಳನ್ನು ನೀಡಿದರು. ಅವರ ಮಾತಿನ ಓಘಕ್ಕೆ ಮತ್ತು ಜ್ಞಾನಕ್ಕೆ ಮೆಚ್ಚಿದ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿತು.
ಅಂಕಲ್ ಎಂ.ಪಿ. ಗಣೇಶ್..
ಭಾರತ ಹಾಕಿ ತಂಡದಲ್ಲಿ ನನ್ನ ತಂದೆಅವರು ಎಂ.ಪಿ. ಗಣೇಶ್ ಅಂಕಲ್ ಜೊತೆಗೆ ಇದ್ದರು. ಮ್ಯೂನಿಕ್ ಒಲಿಂಪಿಕ್ಸ್ ಸಂದರ್ಭದಲ್ಲಿ ಭಯೋತ್ಪಾದಕರಿಂದ ಗ್ರೆನೆಡ್ ದಾಳಿ. ಆಗ ನಾಲ್ಕೈದು ದಿನ ಸುರಕ್ಷಿತ ತಾಣವನ್ನು ನನ್ನ ಅಪ್ಪ ಅಮ್ಮನಿಗೆ ಒದಗಿಸಿಕೊಟ್ಟವರು ಎಂ.ಪಿ. ಗಣೇಶ್. ನನ್ನ ಜೀವನದ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಅಂಕಲ್ ಗಣೇಶ್ ಪ್ರೋತ್ಸಾಹ ಬಹು ದೊಡ್ಡದು.
ಭಾರತ ಟೆನಿಸ್‌ಗೆ ಮುಂದಿನ ನಿಮ್ಮ ಯೋಜನೆ..
ನಮ ದೇಶದಲ್ಲಿ ಭಿನ್ನ ವಿಚಾರಗಳು, ಪದ್ಧತಿಗಳು, ರಾಜಕೀಯ ಸ್ಥಿತಿಗಳಿರಬಹುದು. ಬಹಳಷ್ಟು ಮಕ್ಕಳಿಗೆ ಒಂದು ಹೊತ್ತಿನ ಊಟದ ಕೊರತೆ ಇದೆ. ಪ್ರತಿಯೊಂದು ಮಗುವಿನ ಜೀವನ ಸಂತಸಭರಿತವಾಗುವಂತೆ ಮಾಡುತ್ತೇನೆ. ಕೆಎಸ್‌ೆಎಲ್‌ಟಿಎ ಪದಾಧಿಕಾರಿ ಸುಂದರ್ ರಾಜು ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕುತ್ತೇನೆ.
ಬೆಸ್ಟ್ ವೇ ಟು ರಿಟೈರ್...
ಹೋದ ಸೆಪ್ಟೆಂಬರ್‌ನಲ್ಲಿ ಯುಎಸ್ ಓಪನ್ ಮುಗಿಸಿ ಬಂದೆ. ಅಪ್ಪನಿಗೆ ಹೇಳಿದೆ. ನನ್ನ ಆಟ ಮುಗಿತು. ನಿವೃತ್ತಿಯಾಗುತ್ತೇನೆಂದೆ. ಆದರೆ ಅಪ್ಪ ಒಂದು ಸಲಹೆ ಕೊಟ್ಟರು. ಇಷ್ಟು ವರ್ಷ ನಿನ್ನನ್ನು ಬೆಳೆಸಿದ ಅಭಿಮಾನಿ ಬಳಗಕ್ಕೆ ಕೊನೆಯ ಬಾರಿ ಆಟ ತೋರಿಸಿ ಅವರಿಗೆ ಧನ್ಯವಾದ ಅರ್ಪಿಸು. ನೀನು ಇಷ್ಟಪಡುವ ತಾಣಗಳಲ್ಲಿ ಆಡು. ಆಗ ಜನಿಸಿದ್ದು ಈ ‘ಒನ್ ಲಾಸ್ಟ್ ರೋರ್’ ಎಂಬ ಹ್ಯಾಷ್‌ಟ್ಯಾಗ್. ಬೆಂಗಳೂರಿನಲ್ಲಿ ನಾನು ಕಡೆ ಪಂದ್ಯ ಆಡಲು ಆಯ್ಕೆ ಮಾಡಿಕೊಂಡೆ.
ಮಗಳ ಪ್ರೀತಿ..
ಜೀವನದಲ್ಲಿ ತಂದೆ ಆಗುವುದು ಅತ್ಯಂತ ದೊಡ್ಡ ಸಾರ್ಥಕತೆ. ಅದೂ ಹೆಣ್ಣುಮಗಳ ತಂದೆಯಾಗುವುದಂತೂ ಅತಿ ವಿಶೇಷವಾದ ಮತ್ತು ಪವಿತ್ರವಾದ ಅನುಭವ. ಮಗಳು ಆಯಾನಾ ತನಗೆ ಪ್ರೇರಣೆ. ಅಕೆಯಿಂದ ಕಲಿತದ್ದು ಅಪಾರ. ಆಕೆ ಈಗ ಟೆನಿಸ್ ಆಡುತ್ತಿದ್ದಾಳೆ. ಕುಟುಂಬದ ಮೂರನೇ ತಲೆಮಾರಿನ ಒಲಿಂಪಿಯನ್ ಆಗುತ್ತಾಳೆಂಬ ವಿಶ್ವಾಸ ಲಿಯಾಂಡರ್ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.